ಗುರುವಾಯನಕೆರೆ: ಹಲ್ಲೆ ನಡೆಸಿ ಯುವಕನ ಕೊಲೆ, ಮೂವರ ಬಂಧನ
ಬೆಳ್ತಂಗಡಿ: ಯುವಕನೋರ್ವನನ್ನು ಹಲ್ಲೆ ನಡೆಸಿ ಕೊಲೆಗೈದ ಘಟನೆ ಸೋಮವಾರ ಬೆಳಗ್ಗೆ ಗುರುವಾಯನಕೆರೆ, ಅಲಾದಿಕೊಟ್ಟಿಗೆ ಬಳಿಯ ಕಟ್ಟವೊಂದರ ಆವರಣದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಯತೀಶ್ ಕೊಲೆಯಾದವರು.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಕ ನಿವಾಸಿ ಮೋಹನ್ (30), ಬೆಳ್ತಂಗಡಿ ಪಡಂಗಡಿ ನಿವಾಸಿ ಇಬ್ರಾಹೀಂ (54) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಜ.1ರಂದು ಬೆಳಗ್ಗೆ ಯತೀಶ್ ರ ಮೃತದೇಹ ಗುರುವಾಯನಕೆರೆ, ಅಲಾದಿಕೊಟ್ಟಿಗೆ ಬಳಿ ಇರುವ ಶ್ರೀದೇವಿ ಕಾಂಪ್ಲೆಕ್ಸ್ ಆವರಣದಲ್ಲಿ ಪತ್ತೆಯಾಗಿತ್ತು.
ಸಾವಿನ ಬಗ್ಗೆ ಮೃತರ ಸಹೋದರ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಪೊಲೀಸರು ಘಟನಾ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮರಾ ಫೂಟೇಜ್ ಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಹಲ್ಲೆ ನಡೆಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕೂಡಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.






