ಬಂಟ್ವಾಳ: ಬಿಯರ್ ಬಾಟಲಿಯಿಂದ ತಿವಿದು ಕೊಲೆ
ಬಂಟ್ವಾಳ: ಕೌಟುಂಬಿಕ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕೆಲಸದ ವಿಚಾರವಾಗಿ ಉಂಟಾದ ಸಣ್ಣ ತಕರಾರು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ಮೇ 31ರ ಭಾನುವಾರ ತಡರಾತ್ರಿ ನಡೆದಿದೆ.

ಸ್ಥಳೀಯ ನಿವಾಸಿ ಮಧುಸೂದನ್ (37) ಕೊಲೆಯಾದ ದುರ್ದೈವಿ. ಕೃತ್ಯ ಎಸಗಿದ ಮೃತರ ಅಣ್ಣನ ಮಗ (ಸಹೋದರ ಕೇಶವ ಎಂಬವರ ಪುತ್ರ) ಆರೋಪಿ ರಾಹುಲ್ ಎಂಬಾತನನ್ನು ಪುಂಜಾಲಕಟ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇ 31ರ ರಾತ್ರಿ ಪಿಲಾತಬೆಟ್ಟು ನಿವಾಸಿ ಶೇಖರ ಎಂಬವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಕುಟುಂಬದ ಎಲ್ಲಾ ಸದಸ್ಯರು ಹಾಜರಾಗಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮಧುಸೂದನ್ ಅವರು ತನ್ನ ಅಣ್ಣನ ಮಗನಾದ ರಾಹುಲ್ ಜೊತೆಗೆ ಕೆಲಸದ ವಿಷಯವಾಗಿ ತಕರಾರು ತೆಗೆದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ತೀವ್ರ ಕೋಪಗೊಂಡ ರಾಹುಲ್, ಅಲ್ಲಿಂದ ಸಿಟ್ಟಿನಿಂದ ಹೊರಟು ಹೋಗಿದ್ದಾನೆ.
ಕಾರ್ಯಕ್ರಮ ಮುಗಿದ ಬಳಿಕ ಮನೆಯ ಸಮೀಪ ಜೋರಾಗಿ ಬೊಬ್ಬೆ ಕೇಳಿಬಂದಿದೆ. ಮನೆಯ ಒಳಗಿದ್ದ ಶೇಖರ ಹಾಗೂ ಇತರರು ಧಾವಿಸಿ ಬಂದಾಗ, ಆರೋಪಿ ರಾಹುಲ್ ತಾನು ತಂದಿದ್ದ ಬಿಯರ್ ಬಾಟಲಿಯಿಂದ ಮಧುಸೂದನ್ ಅವರ ಕುತ್ತಿಗೆಗೆ ಬಲವಾಗಿ ತಿವಿದಿರುವುದು ಬೆಳಕಿಗೆ ಬಂದಿದೆ. ಕುತ್ತಿಗೆಗೆ ಗಂಭೀರ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಧುಸೂದನ್ ಅವರನ್ನು ತಕ್ಷಣವೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪೊಲೀಸ್ ದೂರು, ಆರೋಪಿ ವಶಕ್ಕೆ:
ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಶೇಖರ ಅವರು ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪರಾಧ ಕ್ರಮಾಂಕ 58/2026, ಕಲಂ: 103 ಬಿ.ಎನ್.ಎಸ್ (BNS 2023) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿ ರಾಹುಲ್ನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.






