ವಿಟ್ಲ: ಮಗುವಿನ ಸರಗಳ್ಳತನ ಪ್ರಕರಣ; ಸಾಮಾಜಿಕ ಜಾಲತಾಣದಲ್ಲಿ ಕೆಟಿಎಂ ಬೈಕ್ ಸವಾರನ ಫೋಟೋ ವೈರಲ್- ಪೊಲೀಸ್ ಇಲಾಖೆ ಸ್ಪಷ್ಟನೆ
ವಿಟ್ಲ: ತಾಲ್ಲೂಕಿನ ಕೋಡಪದವು ಎಂಬಲ್ಲಿ ಇತ್ತೀಚೆಗೆ ನಡೆದ ಮಗುವಿನ ಚಿನ್ನದ ಸರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೈಕ್ ಸವಾರನ ಫೋಟೋಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿಟ್ಲ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 12 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಪದವು ಎಂಬಲ್ಲಿ ಕೆ.ಟಿ.ಎಂ (KTM) ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, 7 ವರ್ಷದ ಮಗುವನ್ನು ಬೆದರಿಸಿ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 91/2026, ಕಲಂ: 309(4) BNS 2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ನಡುವೆ, ಪ್ರಕರಣದ ಆರೋಪಿ ಎಂದು ಬಿಂಬಿಸಿ ಕೆ.ಟಿ.ಎಂ ಬೈಕ್ ಸವಾರನೊಬ್ಬನ ಭಾವಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸದ್ರಿ ಬೈಕ್ ಸವಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಆತನಿಗೂ ಮತ್ತು ಸರಗಳ್ಳತನದ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದು ದೃಢಪಟ್ಟಿದೆ.
ತಪ್ಪಾದ ಮಾಹಿತಿಯಿಂದಾಗಿ ಸಾರ್ವಜನಿಕ ವಲಯದಲ್ಲಿ ಆತನ ಬಗ್ಗೆ ನಕರಾತ್ಮಕ ಅಭಿಪ್ರಾಯಗಳು ಮೂಡಬಾರದು ಮತ್ತು ಆತನ ಕುಟುಂಬಕ್ಕೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಪೊಲೀಸರು ಈ ಪ್ರಕಟಣೆ ಹೊರಡಿಸಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳನ್ನು ನಂಬಬಾರದು ಮತ್ತು ಅಪಪ್ರಚಾರ ಮಾಡಬಾರದು ಎಂದು ವಿನಂತಿಸಿದ್ದಾರೆ.
ಪ್ರಕರಣದ ನೈಜ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.



