ಕರಾವಳಿ

ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ ‘ಸುಲೂಕ್’ ಕಾರ್ಯಕ್ರಮ

ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ತರಗತಿ ಆರಂಭದ ಅಂಗವಾಗಿ ‘ಸುಲೂಕ್’ ಹಾಗೂ ನೂತನ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿ ಪಡೀಲ್ ಅವರು, ಲೌಕಿಕ ಶಿಕ್ಷಣದೊಂದಿಗೆ ಅಗತ್ಯ ಧಾರ್ಮಿಕ ಶಿಕ್ಷಣವನ್ನೂ ಸಮರ್ಪಕವಾಗಿ ಅಳವಡಿಸಿಕೊಂಡಾಗ ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

 


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ ಅವರು, ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ಉತ್ತಮ ನಡತೆ, ಶಿಸ್ತು ಹಾಗೂ ಸಮಯಪಾಲನೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಕಾಲೇಜಿನ ಮೌಲ್ಯಗಳು, ನಿಯಮಗಳು ಹಾಗೂ ಆದರ್ಶಗಳನ್ನು ಪಾಲಿಸಿಕೊಂಡು ಅಧ್ಯಯನದಲ್ಲಿ ಸಾಧನೆ ಮಾಡುವಂತೆ ಅವರು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಮೌಂಟನ್ ವ್ಯೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಶ್ರಫ್, ಕಚೇರಿ ನಿರ್ವಾಹಕ ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಬಳಿಕ ಕಾಲೇಜಿನ ಉಪನ್ಯಾಸಕಿಯರ ನೇತೃತ್ವದಲ್ಲಿ ಹಿರಿಯ ವಿದ್ಯಾರ್ಥಿನಿಯರು ನೂತನ ವಿದ್ಯಾರ್ಥಿನಿಯರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವಿಧ ಪ್ರತಿಭಾ ಕಾರ್ಯಕ್ರಮ ಮತ್ತು ಸ್ವಾಗತ ಸ್ಮರಣಿಕೆಗಳನ್ನು ವಿತರಿಸಿ ನೂತನ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!