ಚಿನ್ನಾಭರಣ ಕಳವು ಆರೋಪದಿಂದ ಮನ ನೊಂದಿದ್ದ ಯುವತಿ ಆತ್ಮಹತ್ಯೆ
ಚಿನ್ನಾಭರಣ ಕಳವು ಆರೋಪದಿಂದ ಮಾನಸಿಕವಾಗಿ ನೊಂದಿದ್ದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ಹೃದಯ ವಿಧ್ರಾವಕ ಘಟನೆ ಆದೂರು ಸಮೀಪದ ನೆಲ್ತಡ್ಕ ದಲ್ಲಿ ನಡೆದಿದೆ. ನೆರೆಮನೆಯವರ ಹಾಗೂ ಪೊಲೀಸರಿಂದ ಮಾನಸಿಕ ಕಿರುಕುಳದಿಂದ ಬೇಸತ್ತು ಈ ಕೃತ್ಯ ನಡೆಸಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನೆಲ್ತಡ್ಕದ ಜಸೀಲಾ (24) ಆತ್ಮಹತ್ಯೆಗೆ ಶರಣಾದ ಯುವತಿ.

ಕಳೆದ ಭಾನುವಾರ ಜಸೀಲಾ ವಿಷ ಸೇವಿಸಿದ್ದಳು. ಕಾಸರಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಶನಿವಾರ ಮೃತಪಟ್ಟಿದ್ದಾರೆ. ಚಿನ್ನಾಭರಣ ಕಳವು ಆರೋಪಕ್ಕೆ ಗುರಿಯಾಗಿದ್ದ ಈಕೆ ನೆರೆಮನೆಯವರ ಹಾಗೂ ಪೊಲೀಸರಿಂದ ನಿರಂತರ ಮಾನಸಿಕ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾನು ತಪ್ಪು ಮಾಡಿಲ್ಲ, ನಾನು ಅಮಾಯಕಿ ಎಂದು ವಿಡಿಯೋ ಚಿತ್ರೀಕರಣ ಮಾಡಿ ವಿಷ ಸೇವಿಸಿದ್ದಳು ಎನ್ನಲಾಗಿದೆ.
ಪತಿ ಮನೆಯ ಸಮೀಪದ ಯುವಕ ಹಾಗೂ ಆತನ ಕುಟುಂಬಸ್ಥರು ಜಸೀಲಾ ವಿರುದ್ಧ ಕಳವು ಆರೋಪ ಹೊರಿಸಿದ್ದರು. ಪೊಲೀಸ್ ಠಾಣೆಗೆ ಕೊಂಡೊಯ್ದು ಪೊಲೀಸರು ವಿಚಾರಣೆ ಹೆಸರಲ್ಲಿ ಮಾನಸಿಕವಾಗಿ ಕಿರುಕುಳ ನೀಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಎರಡು ಮಕ್ಕಳ ತಾಯಿಯಾದ ಜಸೀಲಾ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಅಪಪ್ರಚಾರ ನಡೆಸಲಾಗಿದ್ದು, ಇದು ಮಾನಸಿಕವಾಗಿ ಕುಗ್ಗಿಸಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಚಿನ್ನಾಭರಣ ಕಳವು ಬಗ್ಗೆ ಆ ದೂರು ಠಾಣಾ ಪೊಲೀಸರು ವಿಚಾರಣೆ ನಡೆಸಿದರೂ ಈಕೆಯ ವಿರುದ್ಧ ಯಾವುದೇ ಸುಳಿವು, ಸಾಕ್ಷ್ಯಗಳು ಲಭಿಸಿದ ಹಿನ್ನಲೆಯಲ್ಲಿ ಬಿಡುಗಡೆ ಗೊಳಿಸಲಾಗಿತ್ತು. ಈ ನಡುವೆ ನೊಂದ ಜಸೀಲಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ಅದೂರು ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.




