ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ:ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯ ಬಂಧನ
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ, ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ 31 ಪ್ರಕರಣಗಳಲ್ಲಿ ಆರೋಪಿಯಾಗಿರುವ, ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ, ರೌಡಿ ಶೀಟರ್ ಹಳೆಯಂಗಡಿಯ ಕೊಪ್ಪಳ ಹೌಸ್‌ನ ಸಫಾನ್ ಹುಸೈನ್ (42) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಆರೋಪಿ 2 ಕೊಲೆ, 4 ಕೊಲೆಯತ್ನ ಗ್ಯಾಂಗ್ ರೇಪ್, 17 ಮೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಹಲ್ಲೆ, ಜೈಲಿನಲ್ಲಿ ಸಹ ಕೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ಸಂಚು ಇತ್ಯಾದಿ ಪ್ರಕರಣಗಳಿಗೆ ಸಂಬಂಧಿಸಿದಂತೆ 31 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ.
ಈತನ ವಿರುದ್ಧ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ದಾಖಲಾಗಿದ್ದ ಪ್ರವೀಣ್ ಎಂಬವರ ಅಪಹರಣ, ದರೋಡೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2020ರಲ್ಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ 3 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಈತನ ವಿರುದ್ಧ 13 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
2017ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಲೆಫ್ಟಿ ಸಫಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ನೇರ ಭಾಗಿಯಾಗಿ ತಲೆಮರೆಸಿಕೊಂಡಿದ್ದ.
ಆರೋಪಿ ಸಫ್ಘಾ ಹುಸೈನ್ ನ್ನು ಆಂಧ್ರಪ್ರದೇಶದ ರಾಯಚೂಟಿಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿ ಮೇಲಿನ ಎರಡು ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಯಾಗಿದೆ. ಮುಲ್ಕಿ ಪ್ರವೀಣ್ ಕೊಲೆ ಪ್ರಕರಣದಲ್ಲಿ ಈತನಿಗೆ ಹೈಕೋರ್ಟ್‌ನಲ್ಲಿ ಶಿಕ್ಷೆಯಾಗಿ ಏಳು ವರ್ಷಗಳ ಸಜೆಯಾಗಿದೆ. ಉಡುಪಿ ಡಕಾಯಿತಿ ಪ್ರಕರಣದಲ್ಲಿಯೂ ಮೂರು ವರ್ಷ ಶಿಕ್ಷೆಯಾಗಿದೆ. ಈ ಶಿಕ್ಷೆಗೆ ಒಳಪಡದೆ ಈತ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ ಇನ್ನೂ 13 ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ. ಇದಲ್ಲದೆ ಬೇರೆ ರಾಜ್ಯಕ್ಕೆ ತೆರಳಿ ನಕಲಿ ಗುರುತಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಬಗ್ಗೆಯೂ ಪ್ರಕರಣ ದಾಖಲಿಸಲಾಗುತ್ತಿದೆ. ಈ ಎಲ್ಲಾ ಪ್ರಕರಣಗಳ ತನಿಖೆ ನಡೆದು ಕ್ರಮ ಆಗಲಿದೆ ಎಂದು ಕಮಿಷನರ್ ಹೇಳಿದರು.





