ಬಂಟ್ವಾಳ: ಅನುಗ್ರಹ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪೊಲೀಸ್ ಠಾಣೆಗೆ ಭೇಟಿ, ಸಂವಾದ

ಬಂಟ್ವಾಳ: ಇಲ್ಲಿಗೆ ಸಮೀಪದ ಕಲ್ಲಡ್ಕದ ಗೋಳ್ತಮಜಲು ಎಂಬಲ್ಲಿರುವ, ಬಾಲಕಿಯರ ವಿದ್ಯಾ ಸಂಸ್ಥೆಯಾಗಿರುವ ಅನುಗ್ರಹ ಮಹಿಳಾ ಕಾಲೇಜು ಇದರ ವಿದ್ಯಾರ್ಥಿನಿಯರಿಗೆ ಇತ್ತೀಚೆಗೆ ಪೊಲೀಸ್ ಠಾಣಾ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ, ಇಲ್ಲಿನ, ಪ್ರಥಮ ಪಿಯುಸಿ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿನಿಯರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಈ ಕಾರ್ಯಕ್ರಮದ ಮೂಲಕ, ಈಗಿನ ಯುವಜನತೆಯಲ್ಲಿ ಪೊಲೀಸ್ ಠಾಣೆಯ ಕಾರ್ಯ ಚಟುವಟಿಕೆಗಳ ಬಗೆಗಿನ ಅರಿವು ಮೂಡಿಸುವ ಜತೆಗೆ ಪೊಲೀಸರ ಬಗ್ಗೆ ಇರುವ ಭಯದ ಭಾವನೆಯನ್ನು ಹೋಗಲಾಡಿಸುವ ಕುರಿತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ನಿಟ್ಟಿನಲ್ಲಿ, ಬಂಟ್ವಾಳ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಧನ್ಯಶ್ರೀ ರವರು ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಕುರಿತು ತಿಳುವಳಿಕೆ ನೀಡಿದ್ದಲ್ಲದೆ, ವಿದ್ಯಾರ್ಥಿನಿಯರು ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಯುಪಿಎಸ್‌ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಪೊಲೀಸ್ ಇಲಾಖೆ ಸೇರಿದಂತೆ, ಸರಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಗಮನಹರಿಸುವಂತೆ ಪ್ರೋತ್ಸಾಹಿಸಿದರು.

ಅದಕ್ಕೆ ಪೂರಕವಾಗಿ ವಿದ್ಯಾರ್ಥಿನಿಯರು ನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳುವಂತೆ ಕಿವಿ ಮಾತು ನೀಡಿದರು. ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ವಾಕಿ – ಟಾಕಿಯನ್ನು ಬಳಸುವ ವಿಧಾನದ ಬಗ್ಗೆ ಹಾಗೂ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿನಿಯರು ತಮಗೆ ಇರುವ ಗೊಂದಲ -ಸಂದೇಹಗಳ ಬಗ್ಗೆ ಪೊಲೀಸರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿದರು.





