ಕೆದಿಲ ದೈವಸ್ಥಾನದ ವತಿಯಿಂದ ಪಾಟ್ರಕೋಡಿ ಮಸೀದಿಯಲ್ಲಿ ಇಫ್ತಾರ್ ಸಂಗಮ
ಬಂಟ್ವಾಳ ತಾಲೂಕಿನ ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ರವಿವಾರ ಸೌಹಾರ್ದ ಇಫ್ತಾರ್ ಸಂಗಮ ಕಾರ್ಯಕ್ರಮ ನಡೆಯಿತು.
ಹಿಂದೂ – ಮುಸ್ಲಿಮ್ – ಕ್ರೈಸ್ತ ಧರ್ಮದ ನೂರಾರು ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಸೌಹಾರ್ದತೆಗೆ ಸಾಕ್ಷಿಯಾಯಿತು.
ಮಸೀದಿಯ ಖತೀಬ್ ಖಲಂದರ್ ಶಾಫಿ ಬಾಖವಿ, ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷ ಕೃಷ್ಣ ಭಟ್, ಉಪಾಧ್ಯಕ್ಷ ಪರಮೇಶ್ವರ ನಾವಡ, ಕೋಶಾಧಿಕಾರಿ ಚೆನ್ನಪ್ಪಗೌಡ, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಜನಾರ್ದನ ಕುಲಾಲ್, ಕಾರ್ಯದರ್ಶಿ ಚರಣ್ ಕುಲಾಲ್, ಬಂಟ್ವಾಳ ತಾಪಂ ಮಾಜಿ ಸದಸ್ಯ ಹಾಜಿ ಆದಂ ಕುಂಞಿ, ಕೆದಿಲ ಗ್ರಾಪಂ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಉಮೇಶ್ ಮುರುವ, ಮಾಜಿ ಸದಸ್ಯ ರಾಬರ್ಟ್ ಲಸ್ರಾದೊ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ, ಮಸೀದಿಯ ಕೋಶಾಧಿಕಾರಿ ಹಮೀದ್ ಹಾಜಿ ಕೋಡಿ, ಪೂರ್ವಾಧ್ಯಕ್ಷರುಗಳಾದ ಮುಹಮ್ಮದ್ ಮಾಸ್ಟರ್, ಕೆ.ಎಸ್.ಯೂಸುಫ್, ಉಮರ್ ಹಾಜಿ ಕರಿಮಜಲು, ಪ್ರಮುಖರಾದ ವಿಶ್ವನಾಥ ಶೆಟ್ಟಿ, ಬಾಲಕೃಷ್ಣ ಗೌಡ, ಚೆನ್ನಪ್ಪ ಕಂಪ, ಮಸೀದಿ ಆಡಳಿತ ಸಮಿತಿ ಸದಸ್ಯರು, ಗೌಸಿಯಾ ಯಂಗ್ ಮೆನ್ಸ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಇದೇ ವೇಳೆ ಮಸೀದಿ ವತಿಯಿಂದ ದೈವಸ್ಥಾನದ ಅಧ್ಯಕ್ಷ ಸಹಿತ ಪ್ರಮುಖರನ್ನು ಸನ್ಮಾನಿಸಲಾಯಿತು. ಅದೇ ರೀತಿ ದೈವಸ್ಥಾನದ ವತಿಯಿಂದ ಮಸೀದಿಯ ಅಧ್ಯಕ್ಷ, ಕಾರ್ಯದರ್ಶಿ, ಖತೀಬರ ಸಹಿತ ದೈವಸ್ಥಾನಕ್ಕೆ ಸ್ಥಳದಾನ ಮಾಡಿದ ದಿ.ಫಕ್ರಬ್ಬ ಹಾಜಿಯವರ ಪುತ್ರ ಹಮೀದ್ ಹಾಜಿ, ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಉಚಿತವಾಗಿ ಆಟೋ ಸೇವೆ ನೀಡಿದ ರಿಕ್ಷಾ ಚಾಲಕ ಅಶ್ರಫ್‌ರನ್ನು ಸನ್ಮಾನಿಸಲಾಯಿತು.
ಮಸೀದಿಯ ಅಧ್ಯಕ್ಷ ಬಾತಿಶ ಪಾಟ್ರಕೋಡಿ ಸ್ವಾಗತಿಸಿದರು. ಕಾರ್ಯದರ್ಶಿ ತಶ್ರೀಫ್ ವಂದಿಸಿದರು. ಕೆ.ಎ.ಶರೀಫ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.
ಇತ್ತೀಚೆಗೆ ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಈ ವೇಳೆ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಮರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಶರಬತ್ತು ಹಂಚಿದ್ದರು. ಕಾರ್ಯಕ್ರಮಕ್ಕೆ ಶುಭ ಕೋರಿ ಬ್ಯಾನರ್‌ಗಳನ್ನೂ ಅಳವಡಿಸಿದ್ದರು. ದೈವಸ್ಥಾನದ ಆಡಳಿತ ಸಮಿತಿ ಕೂಡಾ ಪರಿಸರದ ಮುಸ್ಲಿಮರ ಮನೆಗಳಿಗೆ ತೆರಳಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ ಆಹ್ವಾನಿಸಿತ್ತು. ಮುಸ್ಲಿಮರು ಭಾಗಿಯಾಗಿ ಭಾವೈಕ್ಯತೆ ಮೆರೆದಿದ್ದರು. ಇದೀಗ ದೈವಸ್ಥಾನದ ಆಡಳಿತ ಸಮಿತಿ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಮತ್ತೊಮ್ಮೆ ಸೌಹಾರ್ದ ಸಂದೇಶ ಸಾರುವ ಮೂಲಕ ಮಾದರಿಯಾಗಿದೆ.