ಕರಾವಳಿರಾಜ್ಯ

ಸಮಸ್ತ’ದ ಶತಾಬ್ದಿ ಸಂದೇಶ ಯಾತ್ರೆ ಇಂದು ಸಮಾರೋಪ,
ನಮ್ಮೂರಿಗೆ ಬರುತ್ತಿದ್ದಾರೆ ಸುನ್ನಿಗಳ ಹೃದಯ ಸಾಮ್ರಾಟ – ಸಯ್ಯಿದುಲ್ ಉಲಮಾ

✍️ಕೆ.ಎಂ.ಎ.ಕೊಡುಂಗಾಯಿ                                   ಸಯ್ಯಿದುಲ್ ಉಲಮಾ! ಈ ಹೆಸರು ಕೇಳಿದ ಕ್ಷಣಕ್ಕೇ ಮನದಾಳದಲ್ಲಿ ಭಕ್ತಿ, ಗೌರವ,ಪ್ರೀತಿ ಮತ್ತು ಭರವಸೆ ಎದ್ದು ಬರುತ್ತದೆ. ‘ಸಮಸ್ತ’ದ ಸಾಟಿ ಇಲ್ಲದ ಸಾರಥಿಯಾಗಿ ರಾರಾಜಿಸುತ್ತಿರುವ ತಂಙಳ್ ಉಸ್ತಾದರು, ಇಂದಿನ ಕಾಲಘಟ್ಟದ ಸುನ್ನಿ ಜನಮನಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ನೆಲೆಸಿರುವ ಸಮಕಾಲೀನ ಸುನ್ನಿ ನಾಯಕರು ಎಂಬುದು ನಿರ್ವಿವಾದ ಸತ್ಯ.
 ದಿಟ್ಟ ನಿಲುವು, ದೃಢ ತಾತ್ವಿಕತೆ ಮತ್ತು ಸ್ಪಷ್ಟ ದಾರಿದೀಪದಂತ ನಾಯಕತ್ವ. ಈ ಮೂರೂ ಗುಣಗಳು ಒಂದೇ ರೂಪದಲ್ಲಿ ಆ ಗಟ್ಟಿ ನಾಯಕತ್ವದಲ್ಲಿ ಒಟ್ಟುಗೂಡಿವೆ. ಅದಕ್ಕೇ ಜನರು ಅವರಲ್ಲಿ ತಮ್ಮ ನಿರೀಕ್ಷೆಗಳನ್ನು, ಕನಸುಗಳನ್ನು, ಭವಿಷ್ಯದ ಆಶಾಕಿರಣಗಳನ್ನು ಕಣ್ತುಂಬಾ ಕಾಣುತ್ತಿದ್ದಾರೆ.
ನಿಜ ಹೇಳಬೇಕೆಂದರೆ ಜನಮನವು ಅವರಲ್ಲಿ ವಿಶ್ವೋತ್ತರ ವಿದ್ವಾಂಸ ರಾದ ಶೈಖುನಾ ಶಂಸುಲ್ ಉಲಮಾರ ಪಾವನ ಪ್ರತಿಬಿಂಬ ವನ್ನೇ ಕಾಣುತ್ತಿದೆ.


ಆ ಮಹಾನ್ ಗುರುವಿನ ನೆರಳಲ್ಲೇ ಬೆಳೆದ ಈ ಪ್ರತಿಭಾವಂತ ಶಿಷ್ಯನಲ್ಲಿ ಅದೇ ಮಾತು, ಅದೇ ನೋಟ, ಅದೇ ದೂರದೃಷ್ಟಿ,ಕಾಲಿಕ ಚಿಂತನೆ, ಅಗಾಧ ಜ್ಞಾನ,ಸಮುದಾಯದ ಮೇಲಿನ ಅಚಲ ಕಾಳಜಿ,ಸರ್ವ ಸ್ತರಗಳಲ್ಲೂ ಸ್ಪಂದಿಸಬಲ್ಲ ಸಾಮರ್ಥ್ಯ,ಪ್ರಗತಿಯ ಕನಸು, ಸಾತ್ವಿಕ ಬದುಕಿನ ಸುಗಂಧ, ಗಾಂಭೀರ್ಯದಿಂದ ಕೂಡಿದ ವ್ಯಕ್ತಿತ್ವ,ಮಂದಸ್ಮಿತ ಮುಖಕಮಲ… ಈ ಎಲ್ಲ ಸದ್ಗುಣ ಗಳು ಪಡಿಯಚ್ಚುನಂತೆ ಮೈಗೂಡಿಕೊಂಡಿವೆ. ಬಹುಶಃ ಶಂಸುಲ್ ಉಲಮಾರ ನಂತರ, ಇಷ್ಟೊಂದು ವ್ಯಾಪಕ ಜನಪ್ರಿಯತೆಯನ್ನು ಗಳಿಸಿದ ನಮ್ಮ ಸುನ್ನಿ ನಾಯಕ ಮತ್ತೊಬ್ಬರಿಲ್ಲ ಎಂದರೆ ಅತಿಶಯವಲ್ಲ.
ತಂಙಳ್ ಉಸ್ತಾದ್ ಎಂದರೆ ಸದಾ ಉತ್ಸಾಹದ ಚಿಲುಮೆ.ಹತ್ತಿರಾತ್ತಿರ ಎಪ್ಪತ್ತರ ಹರೆಯದಲ್ಲೂ ಇಪ್ಪತ್ತರ ಉತ್ಸಾಹ,ಮನಸ್ಸು ತುಂಬಾ ಸಮುದಾಯದ ತುಡಿತ,ತಲೆ ತುಂಬಾ ಪ್ರಗತಿಯ ಕನಸು. ಪರಂಪರಾಗತ ಅಹ್ಲುಸ್ಸುನ್ನತ್ ವಲ್ ಜಮಾಅತ್ ನ ತಾತ್ವಿಕ ಬದ್ಧತೆ ಮತ್ತು ಸಾಂಪ್ರದಾಯಿಕತೆಯನ್ನು ಯಾರ ಮರ್ಜಿ–ಮುಲಾಜಿಗೂ ಜಗ್ಗದೆ ದಿಟ್ಟವಾಗಿ ಕಾಪಾಡಿಕೊಂಡು, ಕಾಲದ ಗೋಡೆ ಬರಹವನ್ನು ಓದಿ ಅರಿತು ಹೊಸತನದತ್ತ ಹೆಜ್ಜೆ ಹಾಕುವ ಸಮಕಾಲೀನ ಚಿಂತನೆಯ ಸಮರ್ಥ ಸಾರಥಿ ಅವರು.

ಹಾಗಂತ ಎಷ್ಟೇ ಎತ್ತರಕ್ಕೇರಿದರೂ ಹಮ್ಮು–ಬಿಮ್ಮು ಹತ್ತಿರಕ್ಕೆ ಸುಳಿಯದಂತೆ ನೋಡಿ ಕೊಂಡಿರುವ ಆ ಮಹಾಮನುಷಿ, ದಶದಿಕ್ಕು ಗಳಿಂದ ಬರುವ ವಿದ್ಯಾದಾಹಿಗಳಿಗೆ ನಿರಂತರ ವಿದ್ಯಾದಾನ ಮಾಡುವ ಶ್ರೇಷ್ಠ ಕಾಯಕದಲ್ಲಿ ನಿರತರಾಗಿದ್ದರೂ ‘ಸಮಸ್ತ’ ಎಂಬ ತಖ್ವಾದ ಭದ್ರ ಬುನಾದಿಯ ಮೇಲೆ ಕಟ್ಟಿದ ಬಲಿಷ್ಠ ಉಲಮಾ ಸಂಘಟನೆಯ ಅಧ್ಯಕ್ಷರಾಗಿ, ಶರೀರಕ್ಕೆ ಒಂದಿಷ್ಟು ಬಿಡುವು ಕೊಡದೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ–ವಿದೇಶ ಗಳಲ್ಲಿ ಸಂಚರಿಸುತ್ತಾ, ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ರವರ ನೈಜ ಉತ್ತರಾಧಿಕಾರಿಯ ಮಾದರಿ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಧರ್ಮಬೋಧನೆಯಲ್ಲಿ ತೊಡಗಿರುವುದು ನಿಜಕ್ಕೂ ಅನುಕರಣೀಯ.
ಇಸ್ಲಾಮಿನ ಶಾಂತಿ,ಪ್ರೀತಿ, ಸೌಹಾರ್ದತೆಯ ಸಂದೇಶ ಪ್ರಚುರ ಪಡಿಸುತ್ತಾ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿರುವ ‘ಸಮಸ್ತ’ ಸಂಘಟನೆಯು ಉಮ್ಮತ್ ನ ಆಶಯ–ಆದರ್ಶ ಗಳನ್ನು ಶತಮಾನ ಪೂರ್ತಿ ಅಚಲ ವಾಗಿ ಕಾಯ್ದುಕೊಂಡು ಬಂದು ಇಂದು ಶತಮಾನೋತ್ಸವ ದ ಸಂಭ್ರಮದಲ್ಲಿದೆ. ಇಂತಹ ಐತಿಹಾಸಿಕ ಘಟ್ಟದಲ್ಲಿ ‘ಸಮಸ್ತ’ ಕ್ಕೆ  ದೊರೆತಿರುವ ಈ ಸಮರ್ಥ ನಾಯಕತ್ವ, ನಿಜಕ್ಕೂ ಸಮುದಾಯಕ್ಕೆ ಲಭಿಸಿದ ಮಹಾ ಸೌಭಾಗ್ಯವೇ ಸರಿ. ಶತಮಾನೋತ್ಸವದ ಅಂಗವಾಗಿ, ತಮಿಳುನಾಡಿನ ಕನ್ಯಾಕುಮಾರಿ ಯಿಂದ ಡಿಸೆಂಬರ್ 19ರಂದು ಸಯ್ಯಿದುಲ್ ಉಲಮಾ ಅವರ ನೇತೃತ್ವದಲ್ಲಿ ಹೊರಟ ಶತಾಬ್ದಿ ಸಂದೇಶ ಯಾತ್ರೆ, ಎಲ್ಲೆಡೆ ದಾಖಲೆಯನ್ನೇ ನಿರ್ಮಿಸಿದೆ. ಪ್ರತಿ ಜಿಲ್ಲೆಯಲ್ಲಿ ಹರಿದುಬರುವ ಜನಜಂಗುಳಿ, ಶ್ವೇತ ಶುಭ್ರ ವಸ್ತ್ರಧಾರಿಗಳ ಕಿಕ್ಕಿರಿದ ಸಾಲುಗಳು, ರಸ್ತೆಯ ಇಕ್ಕಲೆಗಳಲ್ಲಿ ಅಬಾಲವೃದ್ಧರಾಗಿ ನಿಂತು ತಂಙಳ್ ಉಸ್ತಾದರನ್ನು ಸ್ವಾಗತಿಸುವ ಜನರ ಉತ್ಸಾಹ, ಸಯ್ಯಿದರನ್ನು ಕಣ್ಣಾರೆ ಕಾಣಬೇಕೆಂಬ ತವಕ,ಕದಲದೆ ನಿಂತು ಮಾತು ಕೇಳಬೇಕೆಂಬ ತುಡಿತ ಇದೆಯಲ್ಲ, ನಿಜಕ್ಕೂ ಇವೆಲ್ಲವೂ ವರ್ಣನಾತೀತ. ಅದು ಅಕ್ಷರಗಳಿಗೆ ಸಿಗದ, ಮಾತಿಗೆ ನಿಲುಕದ ಅಪೂರ್ವ ಅನುಭವ.
ಈ ಸಂದರ್ಭದಲ್ಲಿ ಕಲ್ಮಶರಹಿತ ವ್ಯಕ್ತಿತ್ವದ ಕಣ್ಣಿಯತ್ ಉಸ್ತಾದ್ ರವರ ಪ್ರಾರ್ಥನೆ ನೆನಪಾಗುತ್ತದೆ.
“ಅಲ್ಲಾಹು ನಿಮ್ಮ ಇಲ್ಮ್‌ನಲ್ಲಿ ಬರ್ಕತ್ ನೀಡಲಿ.”
ತಂಙಳ್ ಉಸ್ತಾದ್ ಮುತಅಲ್ಲಿಂ ಆಗಿದ್ದಾಗ ಅವರು ಮಾಡಿದ ಆ ಪ್ರಾರ್ಥನೆಯ ಫಲವನ್ನು ಇಂದು ಸಮುದಾಯ ಕಣ್ತುಂಬಾ ನೋಡಿ ಮನತುಂಬಿ ಸವಿಯುತ್ತಿದೆ. ಅಲ್‌ಹಮ್ದುಲಿಲ್ಲಾಹ್.
  ಅಂದಹಾಗೆ, ಆ “ಸುನ್ನಿ ಹೃದಯ ಸಾಮ್ರಾಟ” ಸಯ್ಯಿದುಲ್ ಉಲಮಾ ರವರ ನೇತೃತ್ವದ ಶತಾಬ್ದಿ ಸಂದೇಶ ಯಾತ್ರೆ ನಮ್ಮ ಜಿಲ್ಲೆಗೆ ಇಂದು (ಡಿಸೆಂಬರ್ 28) ಆಗಮಿಸುತ್ತಿದೆ. ತಂಙಳ್ ಉಸ್ತಾದ್ ರನ್ನು ಅದ್ದೂರಿ ಯಾಗಿ ಸ್ವಾಗತಿಸಲು ‘ಸಮಸ್ತ’ದ ಎಲ್ಲಾ ಘಟಕಗಳು ಹಾಗೂ ಅಭಿಮಾನಿ ಗಳು ಸಜ್ಜಾಗಿ ನಿಂತಿದ್ದಾರೆ. ಮಂಗಳೂರಿನ ಅಡ್ಯಾರ್–ಕಣ್ಣೂರುನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭವು ನಿಸ್ಸಂದೇಹವಾಗಿ ಐತಿಹಾಸಿಕ ಪುಟವೊಂದನ್ನು ಬರೆಯಲಿದೆ.
   ಮುಂದಿನ ಫೆಬ್ರವರಿ 4ರಿಂದ 8ರವರೆಗೆ, ನೆರೆಯ ಕಾಸರಗೋಡಿನ ಕುನಿಯದಲ್ಲಿ ನಡೆಯಲಿರುವ ಶತಮಾನೋತ್ಸವ ಸಮ್ಮೇಳನಕ್ಕೆ ಕರುನಾಡಿನ ಭರ್ಜರಿ ಪ್ರಚಾರಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.
  ನಾವೂ ಕೂಡ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯಗಳಿಸೋಣ. ಗೊತ್ತಿರಲಿ, ಇದು ಕೇವಲ ‘ಸಮಸ್ತ’ಕ್ಕಾಗಿ ಮಾತ್ರವಲ್ಲ, ನಮ್ಮ ಇಹ–ಪರ ವಿಜಯದ ಪಥಕ್ಕಾಗಿ.                                                                            ✍️ಕೆ.ಎಂ.ಎ.ಕೊಡುಂಗಾಯಿ

Leave a Reply

Your email address will not be published. Required fields are marked *

error: Content is protected !!