ಪತ್ನಿ ಜೊತೆ ಸಲುಗೆ: ಚಾಕುವಿನಿಂದ ಇರಿದು ಕೊಲೆ
ಬೆಂಗಳೂರು: ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅಸೋಲೋಮನ್ ಎಕೆನೆ (35) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಓಬಿವರಾ (26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
‘ಅಸೋಲೋಮನ್ ಹಾಗೂ ಆರೋಪಿ ಓಬಿವರಾ ಆಫ್ರಿಕಾ ಪ್ರಜೆಗಳು. ವ್ಯಾಪಾರ ವೀಸಾದಡಿ ನಗರಕ್ಕೆ ಬಂದಿದ್ದ ಇವರು ಪ್ರತ್ಯೇಕವಾಗಿ ನೆಲೆಸಿದ್ದರು. ಯುವತಿ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ತಿಳಿದು ಬಂದಿದೆ.
‘ಓಬಿವರಾ, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಮೇಘಾಲಯದ ಯುವತಿಯೊಬ್ಬರನ್ನು ಪರಿಚಯಿಸಿಕೊಂಡಿದ್ದರು. ಇಬ್ಬರೂ ಪ್ರೀತಿಸಲಾರಂಭಿ ಸಿದ್ದರು. ನಂತರ, ಮದುವೆ ಆಗಿದ್ದರು. ದಾಸರಹಳ್ಳಿಯ ಮುನಿಕೆಂಪಣ್ಣ ಬಡಾವಣೆಯ ಬಹುಮಹಡಿ ಕಟ್ಟಡವೊಂದರ ಎರಡನೇ ಮಹಡಿಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಂಪತಿಗೆ ಮಗು ಸಹ ಇದೆ’ ಎಂದರು.
ಮನೆಗೆ ಕರೆಸಿದ್ದ ಪತ್ನಿ: ‘ಆರೋಪಿಯ ಪತ್ನಿಗೆ ಇತ್ತೀಚೆಗೆ ಅಸೋಲೋಮನ್ ಪರಿಚಯವಾಗಿತ್ತು.ಇಬ್ಬರೂ ಸ್ನೇಹಿತರಾಗಿದ್ದರು. ಸಲುಗೆಯೂ ಬೆಳೆದಿತ್ತು. ಆರೋಪಿಯ ಪತ್ನಿ, ಅ.10ರಂದು ಸಂಜೆ ಅಸೋಲೋಮನ್ ಅವರನ್ನು ಮನೆಗೆ ಕರೆಸಿದ್ದರು. ಕೆಲಸ ನಿಮಿತ್ತ ಯಲಹಂಕಕ್ಕೆ ಹೋಗಿದ್ದ ಓಬಿವರಾ, ಏಕಾಏಕಿ ಮನೆಗೆ ಬಂದಿದ್ದ’ ಎಂದು ಪೊಲೀಸರು ಹೇಳಿದ್ದಾರೆ.
‘ಪತ್ನಿ ಜೊತೆಗಿದ್ದ ಅಸೋಲೋಮನ್ ಕಂಡು ಸಿಟ್ಟಾಗಿದ್ದ ಓಬಿವರಾ, ಜಗಳ ತೆಗೆದಿದ್ದ. ಅವಾಚ್ಯ ಶಬ್ದಗಳಿಂದ ನಿಂದಿ ಸಿದ್ದ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಓಬಿವರಾ, ಚಾಕುವಿನಿಂದ ಅಸೋಲೋಮನ್ ಅವರ ಎದೆ, ಹೊಟ್ಟೆ, ಕುತ್ತಿಗೆಗೆ ಇರಿದಿದ್ದ. ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ಆರೋಪಿಯಿಂದ ತಪ್ಪಿಸಿಕೊಂಡು ಓಡಿದ್ದ ಅಸೋಲೋಮನ್, ಮಹಡಿ ಮೆಟ್ಟಿಲು ಇಳಿಯುವಾಗ ಆಯತಪ್ಪಿ ಬಿದ್ದು ಮೃತಪಟ್ಟರು.
‘ಕೊಲೆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅವಾಗಲೇ ಹುಡುಕಾಟ ನಡೆಸಿ ಆರೋಪಿಯನ್ನು ಬಂಧಿಸಲಾಯಿತು. ಪತ್ನಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತ ಓಬಿವರಾನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.