ಪುತ್ತೂರಿನಲ್ಲಿ ಬಿಜೆಪಿ ಮತ್ತೊಮ್ಮೆ ಗೆಲ್ಲಬೇಕು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು- ವಿಜಯೇಂದ್ರ
ಪುತ್ತೂರು: ಪಕ್ಷದ ಕಾರ್ಯಕರ್ತರಿಗೆ ಯಾವ ರೀತಿ ಗೌರವ ಕೊಡಬೇಕು ಎನ್ನುವುದನ್ನು ನಾವು ಅಟಲ್ ಜಿ ಯವರಿಂದ ಕಲಿಯಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ನ.19ರಂದು ಪುತ್ತೂರಿನಲ್ಲಿ ನಡೆದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಡೀ ರಾಜ್ಯದಲ್ಲಿ ಇಂದು ಕಾರ್ಯಕರ್ತರು ಪರಿತಪಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ತನ್ನ ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಕಾರ್ಯಕರ್ತರು ಕನಸು ಕಾಣುತ್ತಿದ್ದಾರೆ. ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಒಟ್ಟಾಗಿ ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸಬೇಕು. ಪಕ್ಷದ ಲಕ್ಷಾಂತರ ಕಾರ್ಯಕರ್ತರು ತನು-ಮನ-ಧನವನ್ನು ಸಮರ್ಪಿಸಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿದ್ದಾರೆ ಎಂದು ಅವರು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬರಬೇಕು ಎಂದರೆ ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿಯ ಕಮಲ ಚಿಹ್ನೆಯನ್ನು ಅರಳಿಸುವ ಕೆಲಸವನ್ನು ನಾವು ನೀವೆಲ್ಲರೂ ಸೇರಿ ಮಾಡಬೇಕಾಗಿದೆ. ಕಾರ್ಯಕರ್ತರೆಲ್ಲರೂ ತಮ್ಮ ವ್ಯತ್ಯಾಸಗಳನ್ನು ಮರೆತು, ಪಕ್ಷದ ಮುಖಂಡರು ಎಲ್ಲಾ ವೈಮನಸುಗಳನ್ನು ಬದಿಗಿಟ್ಟು ಪುತ್ತೂರಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದೆ ಆದರೆ ರಾಜ್ಯದಲ್ಲಿ 150ಕ್ಕಿಂತಲೂ ಹೆಚ್ಚಿನ ಸ್ಥಾನವನ್ನು ಗಳಿಸಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ಹೇಳಿದರು.
ರಾಜ್ಯದಲ್ಲಿಂದು ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಪಕ್ಷ ಇವತ್ತು ಅಧಿಕಾರಕ್ಕೆ ಬಂದಿದೆ. ಕಳೆದ ಬಾರಿ ಇದ್ದ ಬಿಜೆಪಿ ಸರಕಾರದ ವಿರುದ್ಧ ಅಪಪ್ರಚಾರ ಮಾಡಿ ರಾಜ್ಯವನ್ನು ಸಮೃದ್ಧ ರಾಜ್ಯವನ್ನಾಗಿ ಮಾಡುತ್ತೇವೆ ಎನ್ನುವ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಆಡಳಿತವನ್ನ ಇಡೀ ರಾಜ್ಯದ ಜನತೆ ನೋಡುತ್ತಿದ್ದಾರೆ, ರಾಜ್ಯದಲ್ಲಿ ಬಡವರಿಗೆ ನೆಮ್ಮದಿ ಇಲ್ಲ, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿರುವ ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರ ಅಟ್ಟಹಾಸ ಮರೆಯುತ್ತಿದ್ದು ಅದನ್ನು ಮೆಟ್ಟಿ ನಿಲ್ಲುವಂತ ಕೆಲಸವನ್ನು ನಾವು ನೀವು ಸೇರಿ ಮಾಡಬೇಕಾಗಿದೆ. ಹಿಂದೂ ವಿರೋಧಿ ಕಾಂಗ್ರೆಸ್ ನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಮಾಡುವ ಸಂಕಲ್ಪವನ್ನು ನಾವಿಂದು ಮಾಡಬೇಕಾಗಿದೆ ಎಂದು ಬಿವೈ ವಿಜಯೇಂದ್ರ ಹೇಳಿದರು.





