ನೇಪಾಳದ ಜೈಲಿನಿಂದ 7000ಕ್ಕೂ ಅಧಿಕ ಕೈದಿಗಳು ಪರಾರಿ
ಕಠ್ಮಂಡು: ನೇಪಾಳದಲ್ಲಿ ತೀವ್ರ ಪ್ರತಿಭಟನೆಗಳು ಹಿಂಸಾಚಾರದ ರೂಪ ಪಡೆದುಕೊಂಡು ಪ್ರಧಾನಿ ಕೆ.ಪಿ ಶರ್ಮಾ ಓಲಿ ರಾಜೀನಾಮೆ ನೀಡಿದ ಬೆನ್ನಲ್ಲೇ ನೇಪಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಪ್ರತಿಭಟನಾಕಾರರು ಜೈಲುಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಪಶ್ಚಿಮ ನೇಪಾಳದ ಒಂದು ಸುಧಾರಣಾ ಗೃಹದಲ್ಲಿ ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ 5 ಬಾಲಾಪರಾಧಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನೇಪಾಳ ದೇಶಾದ್ಯಂತ 7,000ಕ್ಕೂ ಹೆಚ್ಚು ಕೈದಿಗಳು ಜೈಲುಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಜೈಲಿನಲ್ಲಿರುವ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕೈದಿಗಳು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಉಂಟಾದ ಘರ್ಷಣೆಯಲ್ಲಿ ಪೊಲೀಸರು ಗುಂಡು ಹಾರಿಸಿದಾಗ 5 ಬಾಲಾಪರಾಧಿಗಳು ಸಾವನ್ನಪ್ಪಿದರು ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನೇಪಾಳದಲ್ಲಿ ನಡೆದ ಪ್ರತಿಭಟನೆಗಳಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಬಿಕ್ಕಟ್ಟು ಉಂಟಾಗಿದೆ. ನಿಯಂತ್ರಣವನ್ನು ಪುನಃಸ್ಥಾಪಿಸಲು ನೇಪಾಳ ಸೇನೆಯು ರಾಷ್ಟ್ರವ್ಯಾಪಿ ನಿರ್ಬಂಧಿತ ಆದೇಶಗಳನ್ನು ವಿಧಿಸಲು ಮತ್ತು ಹಲವಾರು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದೆ.