ಸುಪ್ರೀಂ ಕೋರ್ಟ್ ಸಿಜೆಐ ಮೇಲೆ ಶೂ ಎಸೆದ ವಕೀಲ: ಪ್ರಧಾನಿ ಮೋದಿ ತೀವ್ರ ಖಂಡನೆ
ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮೇಲೆ ವಕೀಲರೊಬ್ಬರು ಶೂ ಎಸೆದ ಆಘಾತಕಾರಿ ಘಟನೆ ನಡೆದಿದೆ.
ಸುಪ್ರೀಂ ಕೋರ್ಟ್ ಆವರಣದಲ್ಲಿರುವ ಕೋರ್ಟ್ ಹಾಲ್-1ರಲ್ಲಿ ವಿಚಾರಣೆಯ ವೇಳೆ 71 ವರ್ಷದ ವಕೀಲ ಕಿಶೋರ್ ರಾಕೇಶ್ ಎಂಬುವವರು ಶೂ ಎಸೆದಿದ್ದು ಘಟನೆಗೆ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬೆನ್ನಲ್ಲೇ ಪ್ರಧಾನಿ ಮೋದಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮೇಲೆ ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳಿಗೆ ಸ್ಥಳವಿಲ್ಲ. ಇದು ಸಂಪೂರ್ಣವಾಗಿ ಖಂಡನೀಯ. ಅಲ್ಲದೇ ಇಂತಹ ಪರಿಸ್ಥಿತಿಯನ್ನು ಎದುರಿಸುವಾಗ ನ್ಯಾಯಮೂರ್ತಿ ಗವಾಯಿ ಅವರು ಪ್ರದರ್ಶಿಸಿದ ಶಾಂತಿಯುತ ನಡೆಯನ್ನ ನಾನು ಮೆಚ್ಚುತ್ತೇನೆ. ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಚೈತನ್ಯ ಬಲಪಡಿಸುವ ನಿಟ್ಟಿನಲ್ಲಿ ಅವರ ಬದ್ಧತೆಯನ್ನು ಎತ್ತಿ ತೋರಿಸುದೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.