ಇಂಗ್ಲೆಂಡ್ ಕ್ರಿಕೆಟಿಗರು ಸಿರಾಜ್‌ಗೆ ಇಟ್ಟಿದ್ದ ಅಡ್ಡ ಹೆಸರೇನು ಗೊತ್ತಾ?
ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಭಾರತ ತಂಡದ ವೇಗಿ ಮುಹಮ್ಮದ್ ಸಿರಾಜ್ ಅವರನ್ನು ಇಂಗ್ಲೆಂಡ್ ತಂಡ ಅಡ್ಡ ಹೆಸರೊಂದನ್ನು ಇಟ್ಟು ಕರೆದಿದ್ದು ಇದನ್ನು ಆ ತಂಡದ ಮಾಜಿ ಆಟಗಾರ ಬಹಿರಂಗಪಡಿಸಿದ್ದಾರೆ. ಸಿರಾಜ್ ಅವರು ಸರಣಿಯಲ್ಲಿ ಒಟ್ಟು 23 ವಿಕೆಟ್ ಗಳನ್ನು ಉರುಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಓವಲ್‌ನಲ್ಲಿ ನಡೆದಿದ್ದ 5ನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ 6 ರನ್ ನಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರು ಸಿರಾಜ್ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮುಹಮ್ಮದ್ ಸಿರಾಜ್ ಅವರಂತಹ ಕ್ರಿಕೆಟಿಗರ ಬಗ್ಗೆ ನೀವು ಜಾಗರೂಕರಾಗಿರಬೇಕು. ಅವರು ನಂಬಲಾಗದಷ್ಟು ಕೌಶಲ್ಯಪೂರ್ಣ ಬೌಲರ್. ಅವರು ಸರಣಿಯುದ್ದಕ್ಕೂ ರೂಟ್, ಪೋಪ್, ಸ್ಪೋಕ್ ರಂತಹ ಆಟಗಾರರನ್ನು ಔಟ್ ಮಾಡುತ್ತಾ ಬಂದಿದ್ದಾರೆ. ಅವರು ಹಾಕುವ ಶ್ರಮವೇ ಅವರ ದೊಡ್ಡ ಸಾಮರ್ಥ್ಯ” ಎಂದು ಬ್ರಾಡ್ ಹೇಳಿದರು.
ಸಿರಾಜ್ ಗೆ ಇಂಗ್ಲೆಂಡ್ ಕ್ರಿಕೆಟಿಗರು ಇಟ್ಟಿರುವ ಅಡ್ಡ ಹೆಸರನ್ನು ಬ್ರಾಡ್ ಇದೇ ವೇಳೆ ಬಹಿರಂಗಪಡಿಸಿದರು. “ನಾನು 2ನೇ ದಿನದಾಟದಲ್ಲಿ ಮೈದಾನದಲ್ಲಿದ್ದೆ ಆಗ ಬೆನ್ ಡಕೆಟ್ ತನ್ನ ಬ್ಯಾಟಿಂಗ್ ಕಸರತ್ತಿನಲ್ಲಿ ತೊಡಗಿದ್ದರೆ, ಸಿರಾಜ್ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದರು. ಸಿರಾಜ್ ಉದ್ದೇಶಿಸಿ ಡಕೆಟ್ ಅವರು ‘ಗುಡ್ ಮಾರ್ನಿಂಗ್ ಮಿಸ್ಟರ್ ಆ್ಯಂಗ್ರಿ. ಹೇಗಿದ್ದೀರಿ “ಮಿಸ್ಟರ್ ಆ್ಯಂಗ್ರಿ” ಎಂದು ನಗುತ್ತಾ ಕೇಳಿದರು. ಆಗ ಸಿರಾಜ್ ಮುಖದಲ್ಲಿ ನಗು ಕಂಡು ಬಂತು. ಸಿರಾಜ್ ಎಲ್ಲ ಹೊತ್ತಿನಲ್ಲಿಯೂ ಹೋರಾಟದ ಗುಂಗಿನಲ್ಲೇ ಇರುತ್ತಿದ್ದ ಕಾರಣ ಇಂಗ್ಲೆಂಡ್ ಆಟಗಾರರು ಅವರನ್ನು ‘ಮಿಸ್ಟರ್ ಆ್ಯಂಗ್ರಿ’ ಎಂದು ಕರೆಯುತ್ತಿದ್ದರು ಎಂದು ಬ್ರಾಡ್ ಹೇಳಿದರು.