ಮಂಗಳೂರು: ನದಿಗೆ ಹಾರಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು
ಮುಲ್ಕಿ: ಪಾವಂಜೆಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬರನ್ನು 112 ಸಹಾಯವಾಣಿಯ ಪೊಲೀಸರು ರಕ್ಷಿಸಿರುವ ಘಟನೆ ವರದಿಯಾಗಿದೆ.
ಮಂಗಳೂರು ನಗರದ ಪಿ.ವಿ.ಎಸ್.ಕಲಾಕುಂಜದ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿ (75) ಎಂಬವರು ಆ.4ರಂದು ಬೆಳಗ್ಗೆ ಕುದ್ರೋಳಿ ದೇವಸ್ಥಾನಕ್ಕೆ ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ನಿತಿನ್ ಎಂಬವರು ಬರ್ಕೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಬರ್ಕೆ ಠಾಣೆಯ ಎಎಸ್ಸೆ ಸುಧಾಕರ್ ಪೊಲೀಸ್ ಸಹಾಯವಾಣಿ 12ಕ್ಕೆ ಮಾಹಿತಿ ರವಾನಿಸಿದರು. ಮಾಹಿತಿ ಪಡೆದ ಮುಲ್ಕಿ ಠಾಣಾ ವ್ಯಾಪ್ತಿಯ ಸಹಾಯವಾಣಿ 112ರಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೇಬಲ್‌ಗಳಾದ ಯೋಗೀಶ್, ಕಿಶೋರ್ ಕುಮಾರ್ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಮಧುಕರ್ ಕಾರ್ಯಪ್ರವೃತ್ತರಾಗಿ ಪಾವಂಜೆ ಸೇತುವೆಯ ಬಳಿ ತೆರಳಿದ್ದರು. ಅಲ್ಲಿ ನದಿಗೆ ಹಾರಲು ಯತ್ನಿಸುತ್ತಿದ್ದ ವಿಶ್ವನಾಥ ಶೆಟ್ಟಿಯನ್ನು ಸಾರ್ವಜನಿಕರ ಸಹಾಯದಿಂದ ತಡೆದು ಜೀವರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಗ್ಯ ಸಮಸ್ಯೆಯಿಂದ ಮನನೊಂದ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.