ಅತೀ ವೇಗದ ಚೆಂಡೆಸೆದು ವಿಶ್ವ ದಾಖಲೆ ನಿರ್ಮಿಸಿದ್ರಾ ಸಿರಾಜ್?
ಭಾರತ ವೇಗಿ ಮಹಮ್ಮದ್ ಸಿರಾಜ್ ಅವರು ವಿಶ್ವ ಕ್ರಿಕೆಟಿನ ಅತೀ ವೇಗದ ಎಸೆತದ ದಾಖಲೆ ಮಾಡಿರುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ..! ಅರೆ ಇದೇನಿದು ಅದ್ಭುತ.. ಸಿರಾಜ್ ವೇಗದ ಬೌಲಿಂಗ್ ಮಾಡುವ ಮೂಲಕ ಹೊಸ ಇತಿಹಾಸ ಬರೆದ್ರಾ? ಟೆಸ್ಟ್ ನ ಮೊದಲ ದಿನದಾಟದ ವೇಳೆ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ವೇಳೆ ಮಹಮದ್ ಸಿರಾಜ್ ಎಸೆದ ಎಸೆತವೊಂದು 181.6kph ಎಂದು ದಾಖಲಾಗಿದ್ದು, ಇದು ಜಗತ್ತಿನ ಅತೀ ವೇಗದ ಎಸೆತವಾಗಿದೆ.!
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದಲ್ಲಿ ಮಹಮದ್ ಸಿರಾಜ್ ಎಸೆದ ಜಗತ್ತಿನ ಅತೀ ವೇಗದ ಎಸೆತದ ವಿಚಾರ ಸುದ್ದಿಗೆ ಗ್ರಾಸವಾಗಿದೆ.
ಈ ಎಸೆತದ ಮೂಲಕ ಸಿರಾದ್ ಪಾಕಿಸ್ತಾನದ ಶೊಯೆಬ್ ಅಖ್ತರ್, ಆಸ್ಟ್ರೇಲಿಯಾದ ಬ್ರೆಟ್ ಲೀ, ಅವರ ವೇಗದ ಎಸೆತಗಳ ದಾಖಲೆಯನ್ನು ಮುರಿದಿದ್ದಾರೆ ಎಂದು ಹೇಳಲಾಗಿತ್ತು. ಒಂದು ವೇಳೆ ಸಿರಾಜ್ ಎಸೆದಿದ್ದು 181.6kph ಎಸೆತವೇ ಆಗಿದ್ದರೆ ಇದು ನಿಜಕ್ಕೂ ಜಗತ್ತಿನ ಅತೀ ವೇಗದ ಎಸೆತವಾಗಿರುತ್ತಿತ್ತು. ಆದರೆ ಆಗಿದ್ದು ಮಾತ್ರ ಬೇರೆಯೇ…
ಆಸ್ಟ್ರೇಲಿಯಾದ 25ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಆಫ್ ಸ್ಟಂಪ್‌ನಿಂದ ಆಚೆಗೆ ಹಾಕಿದ ಚೆಂಡನ್ನು ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲಾಂಬುಶೇನ್ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್‌ಗೆ ಬೌಂಡರಿ ಬಾರಿಸಿದ್ದರು. ಪ್ರತಿ ಎಸೆತದ ಬಳಿಕ ಪ್ರದರ್ಶನವಾಗುವ ಸ್ಪೀಡೋಮೀಟರ್, ಆ ಚೆಂಡನ್ನು ಸಿರಾಜ್ ಗಂಟೆಗೆ 181.6 ಕಿಮೀ ವೇಗದಲ್ಲಿ ಎಸೆದಿದ್ದರು ಎಂದು ತೋರಿಸಿತ್ತು.
ಆದರೆ ಸಿರಾಜ್ ಎಸೆದ ಆ ಚೆಂಡು ಅಷ್ಟು ವೇಗದಿಂದ ಕೂಡಿರಲಿಲ್ಲ. ಬದಲಿಗೆ ಸ್ಪೀಡೋ ಮೀಟರ್ ತಾಂತ್ರಿಕ ದೋಷದಿಂದ ಪರದ ಮೇಲೆ ಹಾಗೆ ಕಾಣಿಸಿತ್ತು ಎಂದು ಹೇಳಲಾಗಿದೆ. ಸಿರಾಜ್ ಎಸೆತ ದಾಖಲೆ ಎಂದು ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಸಿರಾಜ್ ಈ ಎಸೆತದ ಬೆನ್ನಲ್ಲೇ ಅಂತರ್ಜಾಲದಲ್ಲಿ ವೇಗದ ಎಸೆತಗಳ ಕುರಿತು ವ್ಯಾಪಕ ಶೋಧ ನಡೆದಿದ್ದು, ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ವೇಗದ ಎಸೆತಗಳ ಬಗ್ಗೆ ತಿಳಿದುಕೊಳ್ಳಲು ಹುಡುಕಲು ಪ್ರಾರಂಭಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಎಸೆತವನ್ನು ಬೌಲಿಂಗ್ ಮಾಡಿದ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರದ್ದಾಗಿದೆ. 2003 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಖ್ತರ್ 161.3 km/h (100.23 mph) ವೇಗದ ಎಸೆತ ಎಸೆದಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತಿ ವೇಗದ ಎಸೆತವಾಗಿದೆ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಈ ಅದ್ಭುತ ಸಾಧನೆ ನಡೆದಿತ್ತು. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬ್ರೆಟ್ ಲೀ ಇದ್ದು, 2005 ರಲ್ಲಿ ನೇಪಿಯರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ರೆಟ್ ಲೀ 161.1 km/h (100.1 mph) ಎಸೆತವನ್ನು ಬೌಲಿಂಗ್ ಮಾಡಿದ್ದರು.