ಕಾಂತಾರ’ ನೋಡಲು ಸಿನಿ ಪ್ರೇಮಿಗಳ ಕಾತರ’:ಹೌಸ್‌ಫುಲ್ ಪ್ರದರ್ಶನದ ಅಬ್ಬರ
ಪುತ್ತೂರು: ಸದ್ಯ ಕಾಂತಾರ ಸಿನಿಮಾ ಅಬ್ಬರಿಸುತ್ತಿದೆ. ಸಿನಿ ಪ್ರೇಮಿಗಳ ಮನ ಗೆದ್ದಿರುವ ಕಾಂತಾರ ಹೌಸ್‌ಫುಲ್ ಪ್ರದರ್ಶನದೊಂದಿಗೆ ಮುಂದುವರೆದಿದೆ.
ಹೌದು…ಕಳೆದ ಒಂದು ವಾರದಿಂದ ಭಾರೀ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ ಕಾಂತಾರ’ ಒಂದು ದಂತಕಥೆ ಸಿನಿಮಾ ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ. ಕೋಟಿ ಕೋಟಿಗಳಿಕೆಯ ಮೂಲಕ ಬಾಕ್ಸ್‌ಆಫೀಸ್ ಚಿಂದಿ ಉಡಾಯಿಸಿರುವ ‘ಕಾಂತಾರ’ ಪುತ್ತೂರು ಅರುಣಾ ಚಿತ್ರಮಂದಿರದಲ್ಲೂ ಭರ್ಜರಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಸಿನಿಮಾ ನೋಡಲು ಜನ ಟಿಕೇಟ್‌ಗಾಗಿ ಮುಗಿಬೀಳುತ್ತಿದ್ದಾರೆ. ಇಷ್ಟಕ್ಕೂ ಸಿನಿಮಾದಲ್ಲೇನಿದೆ ಅನ್ನೋದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋದಾದರೆ…
ಹೊಂಬಾಳೆ ಸಿನಿಮಾ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡಿರುವ ಕಾಂತಾರವನ್ನು ಕರಾವಳಿ ಮೂಲದ ಕುಂದಾಪುರದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ರಿಷಬ್ ಶೆಟ್ಟಿಗೆ ಕರಾವಳಿಯ ನಂಟು ಇದೆ. ಆದ್ದರಿಂದಲೇ ಕಾಂತಾರದ ಮೂಲಕ ಕರಾವಳಿ ಸೊಗಡಿನ ಆಳಕ್ಕಿಳಿದು ಸಿನಿಮಾ ಮಾಡಿದ್ದಾರೆ. ಕಾಂತಾರ ಎಂಬುದಕ್ಕೆ ದಟ್ಟಾರಣ್ಯ, ನಿಗೂಢವಾದ ಅರಣ್ಯ ಎಂಬ ಅರ್ಥವಿದೆ. ಸಿನಿಮಾದಲ್ಲೂ ಕಾಡು ಸಾಕಷ್ಟು ಪ್ರಮುಖ ಪಾತ್ರವಹಿಸುತ್ತದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಘರ್ಷಣೆ ಹಾಗೂ ಈ ಮಣ್ಣಿನ ದೈವ ಶಕ್ತಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕಾಂತಾರದಲ್ಲಿ ಅರಣ್ಯ ಭೂಮಿಯ ಒತ್ತುವರಿ, ಒಕ್ಕಲೆಬ್ಬಿಸುವಿಕೆ, ಅರಣ್ಯ ಸಂಪತ್ತಿನ ಲೂಟಿ, ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ತಿಕ್ಕಾಟ ಇಂತಹ ಅಂಶಗಳು ಹೈಲೈಟ್ ಆಗುತ್ತವೆ. ಇದೆಲ್ಲದರ ಜೊತೆಗೆ ಕರಾವಳಿ ಸಂಸ್ಕೃತಿಯ ಅನಾವರಣ ಈ ಸಿನಿಮಾದ ಪ್ರಮಖ ಹೈಲೈಟ್.
ದೈವ, ಭೂತಾರಾಧನೆ, ಭೂತ ಕೋಲವನ್ನು ತೆರೆಮೇಲೆ ಅಮೋಘವಾಗಿ ತೋರಿಸುತ್ತ ಕರಾವಳಿ ಜನರ ಧಾರ್ಮಿಕ ನಂಬಿಕೆಗಳು ಅಲ್ಲಿನ ಜನರ ಭಾವನೆಗಳನ್ನು ಅತ್ಯುತ್ತಮವಾಗಿ ತೋರಿಸುವ ಯತ್ನವನ್ನು ರಿಷಬ್ ಮಾಡಿದ್ದಾರೆ. ಈ ಆಚರಣೆಗಳಿಗೂ ಮತ್ತು ಅರಣ್ಯದ ಕಥೆಗೂ ಏನು ಕನೆಕ್ಷನ್ ಅನ್ನೋದನ್ನು ನೀವು ಸಿನಿಮಾದಲ್ಲಿ ನೋಡಿಯೇ ತಿಳಿಯಬೇಕು. ಕಾಂತಾರದಲ್ಲಿ ಮೇಕಿಂಗ್ ಹೈಲೈಟ್ ಎನಿಸಿಕೊಳ್ಳುತ್ತದೆ. ಪ್ರೀತಿ,ಪ್ರೇಮ, ಹಾಸ್ಯ ಇಂತಹ ದೃಶ್ಯಗಳನ್ನು ಕೂಡ ರಮಣೀಯವಾಗಿ ಚಿತ್ರಿಸಿದ್ದಾರೆ. ಜಾತಿ ಪದ್ದತಿಯ ಬಗ್ಗೆಯೂ ಕಾಂತಾರ ಮಾತನಾಡುತ್ತದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಬಹಳ ಕಾಲ ನೆನಪಲ್ಲಿ ಉಳಿಯುತ್ತದೆ.
ಚಿತ್ರದ ಕೊನೆಯ 20 ನಿಮಿಷ ಪ್ರೇಕ್ಷಕನನ್ನು ಬೇರಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಇಲ್ಲಿ ರಿಷಬ್ ಶೆಟ್ಟಿ ನಟನೆ ಅಚ್ಚರಿಯನ್ನು ಮೂಡಿಸುತ್ತದೆ. ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬ ಕಲಾವಿದರೂ ಕೂಡ ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ, ಕಿಶೋರ್, ಅಚ್ಚ್ಯುತ್ ಕುಮಾರ್, ಮಾನಸಿ ಸುಧೀರ್, ಪ್ರಕಾಶ್ ತೂಮಿನಾಡ್, ದೀಪಕ್ ರೈ ಪಾಣಾಜೆ ಹೀಗೆ ಎಲ್ಲರೂ ಖುಷಿ ಕೊಡುತ್ತಾರೆ. ಒಟ್ಟಿನಲ್ಲಿ ಒಂದು ಒಳ್ಳೆಯ ಅತ್ಯುತ್ತಮ ಸಿನಿಮಾ ಇದಾಗಿದೆ ಎನ್ನುವುದು ಸಿನಿ ಪ್ರೇಕ್ಷಕರ ಅಭಿಪ್ರಾಯವಾಗಿದೆ.