ಪುತ್ತೂರಿನಲ್ಲಿ ಎಸ್.ವೈ.ಎಸ್ ಸೌಹಾರ್ದ ಸಂಚಾರ
ಪುತ್ತೂರು: ಕರ್ನಾಟಕ ಸುನ್ನೀ ಯುವಜನ ಸಂಘದ(ಎಸ್‌ವೈಎಸ್) ವತಿಯಿಂದ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷ ವಾಕ್ಯದೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ‘ಸೌಹಾರ್ದ ಸಂಚಾರ’ ಪ್ರಯುಕ್ತ ಸರ್ವಧರ್ಮೀಯರನ್ನು ಸೇರಿಸಿಕೊಂಡು ಕಾಲ್ನಡಿಗೆ ಜಾಥಾ ಜು.16ರಂದು ಪುತ್ತೂರಿನಲ್ಲಿ ನಡೆಯಿತು.

ಏಳ್ಮುಡಿ ಬಳಿಯಲ್ಲಿ ಚಾಲನೆಗೊಂಡ ಕಾಲ್ನಡಿಗೆ ಜಾಥಾ ಕಿಲ್ಲೆ ಮೈದಾನದ ವರೆಗೆ ನಡೆಯಿತು. ಹಿಂದೂ-ಮುಸ್ಲಿಂ-ಕ್ರೈಸ್ತ ಮುಖಂಡರು ಪರಸ್ಪರ ಕೈ ಕೈ ಹಿಡಿದುಕೊಂಡು ಜಾಥಾದಲ್ಲಿ ಸಾಗಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಬಶೀರ್ ಸಹದಿ ಬೆಂಗಳೂರು, ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನ ಧರ್ಮಗುರು ಫಾ.ಲಾರೆನ್ಸ್ ಮಸ್ಕರೇನ್ಹಸ್ ಸೇರಿದಂತೆ ನೂರಾರು ಮಂದಿ ಸರ್ವಧರ್ಮೀಯ ಭಾಂಧವರು ಪರಸ್ಪರ ಕೈಕೈ ಹಿಡಿದು ಸೌಹಾರ್ದ ಸಂಚಾರ ಜಾಥಾದಲ್ಲಿ ಭಾಗಿಯಾದರು.
ಜಾಥಾವು ಪುತ್ತೂರು ಪೇಟೆ ಮೂಲಕ ಸಾಗಿ ಕಿಲ್ಲೆ ಮೈದಾನದಲ್ಲಿ ಸಮಾಪ್ತಿಯಾಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಸೌಹಾರ್ದತೆ ಎನ್ನುವುದು ನನಗೆ ಹೊಸತಲ್ಲ, ನಮ್ಮ ಹಿರಿಯರ ಕಾಲದಿಂದಲೂ ಬಂದಿರುವ ಸೌಹಾರ್ದತೆಯ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದೇವೆ, ಎಲ್ಲರೂ ಒಗ್ಗಟ್ಟಾಗಿ ಜೀವನ ನಡೆಸಬೇಕು ಎಂದ ಅವರು ಸೌಹಾರ್ದ ಸಮಾಜಕ್ಕಾಗಿ ಎಸ್‌ವೈಎಸ್ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಡಾ.ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ ಮಾತನಾಡಿ ಐಕ್ಯತೆ ಈ ದೇಶದ ಉಸಿರಾಗಿದ್ದು ಸಮಾಜದಲ್ಲಿ ಅಶಾಂತಿಯ ವಾತಾವರಣ ಹೆಚ್ಚುತ್ತಿದ್ದು ಅದನ್ನು ಇಲ್ಲದಾಗಿಸಲು ಸರ್ವಧರ್ಮೀಯರು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನ ಉಪಾಧ್ಯಕ್ಷ ಜೆರಾಲ್ಡ್ ಡಿಕಾಸ್ಟಾ ಮಾತನಾಡಿ ಪ್ರತೀ ಮನೆಯಲ್ಲೂ, ಪ್ರತಿಯೊಬ್ಬರ ಹೃದಯದಲ್ಲೂ ಸೌಹಾರ್ದತೆಯ ದೀಪ ಹಚ್ಚುವ ಮೂಲಕ ಸುಂದರ ನಾಡನ್ನು ನಾವೆಲ್ಲರೂ ಸೇರಿ ಕಟ್ಟೋಣ ಎಂದು ಅವರು ಹೇಳಿದರು.
ಮುಖ್ಯ ಭಾಷಣ ಮಾಡಿದ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಮಾತನಾಡಿ ಮಾನವೀಯತೆಗಿಂತ ಶ್ರೇಷ್ಠವಾದ ಧರ್ಮ ಇನ್ನೊಂದಿಲ್ಲ, ಹಾಗಾಗಿ ಪರಸ್ಪರ ಹೃದಯದಿಂದ ಒಬ್ಬರನ್ನೊಬ್ಬರು ಪ್ರೀತಿಸುವ, ಗೌರವಿಸುವ ಮೂಲಕ ಸೌಹಾರ್ದ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಅವರು ಹೇಳಿದರು.
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಮಾತನಾಡಿ ಕೋಮುದ್ವೇಷ ಭಾಷಣ ಮಾಡುವವರನ್ನು ಬಹಿಷ್ಕರಿಸಿ, ಕೋಮು ಸೌಹಾರ್ದತೆಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದರು.
ಪುತ್ತೂರು ಸತ್ಯಸಾಯಿ ಆಸ್ಪತ್ರೆಯ ಎಲುಬು ತಜ್ಞ ಡಾ.ಸತ್ಯ ಸುಂದರ ರಾವ್ ಮಾತನಾಡಿ ಎಲ್ಲರಲ್ಲೂ ಕೆಂಪು ರಕ್ತ ಹರಿಯುತ್ತಿದೆ, ಹಾಗಾಗಿ ನಮ್ಮೊಳಗೆ ಬೇಧಭಾವ ಬೇಡ ಎಂದರು.
ಎಸ್.ವೈ.ಎಸ್ ರಾಜ್ಯ ಪ್ರ.ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಶಫೀಕ್ ಮಾಸ್ಟರ್ ತಿಂಗಳಾಡಿ ಸ್ವಾಗತಿಸಿದರು. ಸ್ವಾಗತ ಸಮಿತಿ ಕನ್ವೀನರ್ ಸ್ವಾಲಿಹ್ ಮುರ ವಂದಿಸಿದರು. ಹಸೈನಾರ್ ಹಾಗೂ ಹಾರಿಸ್ ಮದನಿ ಪಾಟ್ರಕೋಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ.ಶ್ರೀಕಾಂತ್, ಎಂ.ಎಸ್ ಮುಹಮ್ಮದ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಎಚ್ ಮಹಮ್ಮದ್ ಆಲಿ, ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ಸೈ ಆಂಜನೇಯ ರೆಡ್ಡಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಹಾಜಿ ಅಬ್ದುಲ್ ರಹಿಮಾನ್ ಆಝಾದ್, ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಕೃಷ್ಣಪ್ರಸಾದ್ ಆಳ್ವ, ಸುಂದರ ಪೂಜಾರಿ ಬಡಾವು, ಅಮಳ ರಾಮಚಂದ್ರ, ಡಾ.ರಾಮ್‌ಮೋಹನ್, ಡಾ.ಈಶ್ವರ್ ಪ್ರಕಾಸ್, ಡಾ.ಯದುರಾಜ್, ಮಹಮ್ಮದ್ ಬಡಗನ್ನೂರು, ಯೂಸುಫ್ ಗೌಸಿಯಾ ಸಾಜ, ಯುಸುಫ್ ಹಾಜಿ ಕೈಕಾರ, ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ನೂರುದ್ದೀನ್ ಸಾಲ್ಮರ, ಅಶ್ರಫ್ ಬಾವು, ಹಮೀದ್ ಸಾಲ್ಮರ, ಇಕ್ಬಾಲ್ ಬಪ್ಪಳಿಗೆ, ಅಬೂಶಝ ಉಸ್ತಾದ್ ಕೂರ್ನಡ್ಕ, ಮೋನು ಬಪ್ಪಳಿಗೆ, ಅಬೂಬಕ್ಕರ್ ಆರ್ಲಪದವು, ರಝಾಕ್ ಬಪ್ಪಳಿಗೆ, ಅದ್ದು ಪಡೀಲ್ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.



