ಪುತ್ತೂರು| SDPI ಪ್ರತಿಭಟನೆಯಲ್ಲಿ ಭಾಗಿಯಾಗಿ ನ್ಯಾಯಕ್ಕೆ ಆಗ್ರಹಿಸಿದ ಸಂತ್ರಸ್ತೆಯ ತಾಯಿ
ಪುತ್ತೂರು: ಬಿಜೆಪಿ ಮುಖಂಡರೋರ್ವರ ಪುತ್ರನಿಂದ ಯುವತಿಗೆ ವಂಚನೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಜು.2 ರಂದು ಪುತ್ತೂರು ಎಸ್ ಡಿ ಪಿ ಐ ವತಿಯಿಂದ ಪುತ್ತೂರು ನಗರಸಭೆಯ ಎದುರು ಪ್ರತಿಭಟನೆ ನಡೆಯಿತು.

ಎಸ್ ಡಿ ಪಿ ಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಶ್ ಅಲಿ ಬಂಟ್ವಾಳ ಮಾತನಾಡಿ, ಹಿಂದು ನಾವೆಲ್ಲ ಒಂದು ಎಂಬ ಸ್ಲೋಗನ್ ವೇದಿಕೆಯ ರಾಜಕೀಯಕ್ಕೆ ಮಾತ್ರವೇ? ಓರ್ವ ತಾಯಿಗೆ ನ್ಯಾಯ ಕೊಡಲು ಆಗದ ಮುಖಂಡರು ಅವರ ಅಸಲಿಯತ್ತನ್ನು ತೋರಿಸಿದ್ದಾರೆ, ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುವವರು ಇಲ್ಲಿದ್ದಾರೆ, ಆದರೆ ನ್ಯಾಯಕ್ಕಾಗಿ ಹೋರಾಟ ಮಾಡುವ ಒಂದು ಹಿಂದು ಸಂಘಟನೆಯೂ ಇಲ್ಲ ಎಂದರು.
ಹಿಂದು ಮುಖಂಡ ಪ್ರಭಾಕರ ಭಟ್, ಹಿಂದುತ್ವವಾದಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಇದೇ ಊರಿನ ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ.? ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸಂಜೀವ ಮಠಂದೂರು ಎಲ್ಲಿದ್ದಾರೆ? ಯಾಕೆ ಸಂತ್ರಸ್ತೆಯ ಪರ ಮಾತನಾಡುವುದಿಲ್ಲ, ಇವರ ಮೌನದ ಹಿಂದಿನ ಗುಟ್ಟೇನು? ಇವರ ಹಿಂದುತ್ವ ಈಗ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ ಅವರು ಇವತ್ತು ಸಂತ್ರಸ್ತೆಯ ನ್ಯಾಯದ ಹೋರಾಟಕ್ಕೆ ನೀವು ಇಲ್ಲದಿದ್ದರೆ ಎಸ್ ಡಿಪಿಐ ಪುತ್ತೂರು ನಾಯಕರು ಇದ್ದಾರೆ ಎಂದರು..
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂತ್ರಸ್ತೆಯ ತಾಯಿ ಮಾತನಾಡಿ ನಮಗೆ ಅನ್ಯಾಯ ಆಗಿದ್ದು ಯಾರಲ್ಲಿ ಹೇಳಿದರೂ ನ್ಯಾಯ ಒದಗಿಸಲು ಮುಂದಾಗುತ್ತಿಲ್ಲ, ನಾನು ಹಿಂದು ಮುಖಂಡರಲ್ಲಿ ಮಾತನಾಡಿದ್ದೇನೆ. ಮದುವೆ ಮಾಡಿ ಕೊಡಬೇಕೆಂದು ಯಾರು ಹೇಳಿಲ್ಲ. ನಮ್ಮ ಪರವಾಗಿ ಯಾರೂ ನಿಲ್ಲುತ್ತಿಲ್ಲ, ಹುಡುಗನನ್ನು ಅವರ ಅಪ್ಪ ಅಡಗಿಸಿಟ್ಟಿದ್ದಾರೆ ಎಂದು ಹೇಳಿದರು. ನನಗೆ ನ್ಯಾಯ ಸಿಗದಾಗ ನಾನು ನನಗೆ ಬೇಕಾದ ಸಂಘಟನೆ ಜೊತೆ ಬಂದಿದ್ದೇನೆ. ನನ್ನ ಮಗಳ ಮಗುವಿಗೆ ತಂದೆಯ ಸ್ಥಾನ ಕೊಡಿಸಿ, ಹುಡಗನೊಂದಿಗೆ ರಿಜಿಸ್ಟ್ರರ್ ಮ್ಯಾರೇಜ್ ಆಗಬೇಕು ಎಂದು ಅವರು ಹೇಳಿದರು.
ಎಸ್ ಡಿ ಪಿ ಐ ಜಿಲ್ಲಾ ಸದಸ್ಯೆ ಜೀನತ್ ಬಂಟ್ವಾಳ ಮಾತನಾಡಿ, ಅನ್ಯಾಯ, ಅತ್ಯಾಚಾರ ಎಸಗಿದವನು ಯಾವುದೋ ಅಬ್ದುಲ್ಲ, ಜೋಸಫ್ ಆಗಿದ್ದಾರೆ. ಶೋಭಕ್ಕ ಪ್ರತ್ಯಕ್ಷ ಆಗುತ್ತಿದ್ದರು, ಇಲ್ಲಿ ಬಿಜೆಪಿ ಮುಖಂಡನ ಪುತ್ರ ಆದದ್ದಕ್ಕೆ ಬಿಜೆಪಿ, ಪರಿವಾರದವರ ಪತ್ತೆ ಇಲ್ಲ ಎಂದರು. ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಪ್ ಬಾವು ಅಧ್ಯಕ್ಷತೆ ವಹಿಸಿದರು. ತಾಜುದ್ದಿನ್ ಸಾಲ್ಮರ ಮಾತನಾಡಿದರು. ನಗರಸಭೆ ಸದಸ್ಯೆ ಪಾತಿಮಾತ್ ಜೊಹರಾ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಉಸ್ಮಾನ್ ಎ ಕೆ ನಿರೂಪಿಸಿದರು.