ಕ್ರೈಂರಾಷ್ಟ್ರೀಯ

ಕಾರಿನೊಳಗೆ ಉಸಿರುಗಟ್ಟಿ ನಾಲ್ವರು ಮಕ್ಕಳು ದಾರುಣ ಮೃತ್ಯು

ನಿಲ್ಲಿಸಿದ್ದ ಕಾರಿನ ಒಳಗೆ ಸಿಲುಕಿ ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಸಣ್ಣ ನಿರ್ಲಕ್ಷ್ಯದಿಂದಾಗಿ ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡ ಘಟನೆ
ಆಂಧ್ರಪ್ರದೇಶದ ವಿಜಯನಗರಂ ಗ್ರಾಮೀಣ ಮಂಡಲದ ದ್ವಾರಪುಡಿ ಗ್ರಾಮದಲ್ಲಿ ವರದಿಯಾಗಿದೆ.

ಎಷ್ಟು ಹೊತ್ತಾದರೂ ಮಕ್ಕಳು ಬಾರದ ಕಾರಣ ಪೋಷಕರು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಹುಡುಕಿದ ನಂತರ ಕಾರಿನಲ್ಲಿ ಸಿಲುಕಿರುವುದು ಪತ್ತೆಯಾಗಿದೆ.

ಬಳಿಕ ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರಗೆ ತಂದಿದ್ದಾರೆ. ಕೂಡಲೇ ವಿಜಯನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.


ಇಬ್ಬರು ಮಕ್ಕಳು ಸಹೋದರಿಯರಾಗಿದ್ದು, ನಾಲ್ವರು ಮಕ್ಕಳು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ದ್ವಾರಪುಡಿ ಗ್ರಾಮದ ಮಹಿಳಾ ಮಂಡಳಿ ಕಚೇರಿಯ ಬಳಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾರನ್ನು ನಿಲ್ಲಿಸಿದ್ದ. ಕಾರು ಲಾಕ್ ಮಾಡುವುದನ್ನು ಮರೆತಿದ್ದ ಎನ್ನಲಾಗಿದೆ. ಈ ನಡುವೆ ಭಾನುವಾರ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಕಾರಿನೊಳಗೆ ಹೋಗಿದ್ದು, ಕಾರಿನ ಬಾಗಿಲು ಲಾಕ್ ಆಗಿದೆ. ಈ ವೇಳೆ ಮಕ್ಕಳಿಗೆ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *

error: Content is protected !!