ಸಿಸಿಟಿವಿ ಕ್ಯಾಮರಾಕ್ಕೆ ಹಾನಿ, ಡಿವಿಆರ್, ದೇವರ ಫೋಟೋ ಸುಟ್ಟು ಹಾಕಿರುವ ಪ್ರಕರಣ: ಇಬ್ಬರು ಬಾಲಕರು ವಶಕ್ಕೆ
ವಿಟ್ಲ: ಖಾಸಗಿ ಸ್ಥಳದಲ್ಲಿದ್ದ ಇಂಟರ್ ಲಾಕ್ ಘಟಕಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕರಿಬ್ಬರು ತೆರಳಿ ಸಿಸಿಟಿವಿ ಕ್ಯಾಮರಾ ಹಾನಿ ಮಾಡಿ, ದೇವರ ಫೋಟೊ ಮತ್ತು ಸಿಸಿ ಟಿವಿ ಕ್ಯಾಮರಾದ ಡಿವಿಆರ್‌ನ್ನು ಸುಟ್ಟು ಹಾಕಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಣಚ ಗ್ರಾಮದ ಪಾಲಸ್ತಡ್ಕ ನಿವಾಸಿ ಆನಂದಗೌಡ ಎಂಬವರ ಪತ್ನಿ ಹೆಸರಿನಲ್ಲಿ ಪಿ.ಬಿ.ಇಂಡಸ್ಟ್ರೀಸ್ ಇಂಟರ್ ಲಾಕ್ ಘಟಕವನ್ನು ನಡೆಸುತ್ತಿದ್ದು, ಘಟಕಕ್ಕೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಘಟಕದ ಬಾಗಿಲನ್ನು ಮುರಿದು ಅಕ್ರಮ ಪ್ರವೇಶ ಮಾಡಿ 2 ಸಿಸಿಟಿವಿ ಕ್ಯಾಮರಾಗಳನ್ನು ತುಂಡರಿಸಿದ್ದಲ್ಲದೇ ಸಿಸಿ ಕ್ಯಾಮರಾದ ಡಿವಿಆರ್ ಮತ್ತು ದೇವರ ಪೋಟೊವನ್ನು ಸುಟ್ಟು ಹಾಕಿರುವುದು ಕಂಡು ಬಂದಿದೆ ಎಂದು ಆನಂದ ಗೌಡ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವಿಆರ್ ಸುಟ್ಟುಹೋಗಿದ್ದರೂ ಮಾಲಕರ ಮೊಬೈಲ್‌ಗೆ ಸಿಸಿಟಿವಿ ಸಂಪರ್ಕ ಇದ್ದುದರಿಂದ ಇಬ್ಬರು ಬಾಲಕರು ಕೃತ್ಯವೆಸಗಿರುವುದು ಕಂಡು ಬಂದಿದೆ. ಅವರನ್ನು ವಶಕ್ಕೆ ಪಡೆದು ಪೋಷಕರ ಸಮಕ್ಷಮ ವಿಚಾರಣೆ ನಡೆಸಿದಾಗ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.