ಪುತ್ತೂರು: ಶಾಮಿಯಾನ ಲಾರಿಗೆ ಬೈಕ್ ಡಿಕ್ಕಿ, ಸವಾರ ಮೃತ್ಯು
ಪುತ್ತೂರು:ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಶಾಮಿಯಾನ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕುಂಜುರುಪಂಜ ಸಮೀಪದ ನಿವಾಸಿ ಸುದೀಪ್ ಚೊಕ್ಕಾಡಿ ಎಂಬವರು ಮೃತಪಟ್ಟ ಘಟನೆ ಉರ್ಲಾಂಡಿ ಎಂಬಲ್ಲಿ ಮೇ.18 ರಂದು ನಡೆದಿದೆ.

ಸುದೀಪ್ ಅವರು ಭಾನುವಾರ ರಾತ್ರಿ ತಮ್ಮ ಬೈಕ್‌ನಲ್ಲಿ ನೇರಳಕಟ್ಟೆಯಲ್ಲಿರುವ ಸಹೋದರಿಯ ಮನೆಯ ಕಡೆಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ, ಉರ್ಲಾಂಡಿ ಬಳಿ, ಶಾಮಿಯಾನ ಸಲಕರಣೆ ತುಂಬಿದ್ದ ಲಾರಿಯೊಂದು ರಸ್ತೆಯಲ್ಲಿ ನಿಲ್ಲಿಸಿತ್ತು. ತುಂತುರು ಮಳೆ ಸುರಿಯುತ್ತಿದ್ದ ಕಾರಣ, ಕತ್ತಲೆಯಲ್ಲಿ ರಸ್ತೆಯಲ್ಲಿದ್ದ ಲಾರಿ ಏಕಾಏಕಿ ಗೋಚರಿಸದೆ, ಸುದೀಪ್ ಅವರ ಬೈಕ್ ಲಾರಿಯ ಹಿಂಬದಿಗೆ ರಭಸವಾಗಿ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಸುದೀಪ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.