ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ಕೊಲೆ ಪ್ರಕರಣ; ಇಬ್ಬರು ಪೊಲೀಸ್ ವಶಕ್ಕೆ
ಮಂಗಳೂರು: ಮೂಲ್ಕಿ ಮೂಲದ ಆಟೋ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ಎಂಬವರನ್ನು ಕೊಲೆಗೈದು ಮಂಜೇಶ್ವರ ಸಮೀಪ ಬಾವಿಗೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರೂ ಮಂಗಳೂರು ನಿವಾಸಿಗಳು ಎನ್ನಲಾಗಿದೆ. ಮುಹಮ್ಮದ್ ಶರೀಫ್ ರವರ ಮೃತದೇಹ ಕುಂಜತ್ತೂರು ಪದವು ಎಂಬಲ್ಲಿ ಬಾವಿಯಲ್ಲಿ ಪತ್ತೆಯಾಗಿತ್ತು. ಮಂಗಳೂರಿನಿಂದ ಮೂವರು ರಿಕ್ಷಾ ಬಾಡಿಗೆಗೆ ಪಡೆದು ತೆರಳಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಶರೀಫ್ ರವರ ಆಟೋ ರಿಕ್ಷಾ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಮಂಜೇಶ್ವರ ಕಡೆಗೆ ಬರುತ್ತಿರುವುದು ತಲಪಾಡಿಯಲ್ಲಿನ ಸಿಸಿ ಟಿವಿ ಕ್ಯಾಮೆರ ದೃಶ್ಯ ಸಿಕ್ಕಿತ್ತು. ಈ ಎಲ್ಲಾ ಮಾಹಿತಿಗಳನ್ನು ಕೇಂದ್ರೀಕರಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಗುರುವಾರ ರಾತ್ರಿ ಶರೀಫ್ ರವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿತ್ತು. ಸಂಶಯಾಸ್ಪದವಾಗಿ ನಿರ್ಜನ ಸ್ಥಳದಲ್ಲಿ ಆಟೋರಿಕ್ಷಾ ಕಂಡುಬಂದ ಹಿನ್ನಲೆಯಲ್ಲಿ ಪರಿಸರ ವಾಸಿಗಳು ಗಮನಿಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು ಕೊಲೆಗೈದು ಬಾವಿಗೆಸೆದಿದ್ದರು ಎಂದು ಮರಣೋತ್ತರ ಪರೀಕ್ಷೆಯಿಂದ ದೃಡಪಟ್ಟಿತ್ತು.