ಪ್ರತಿಸುಂಕ ಘೋಷಣೆಯಿಂದ ಹಿಂದೆ ಸರಿಯುವುದಿಲ್ಲ: ಟ್ರಂಪ್
ವಾಷಿಂಗ್ಟನ್: ಪ್ರತಿಸುಂಕ ಘೋಷಣೆಯಿಂದ ಜಾಗತಿಕ
ಮಾರುಕಟ್ಟೆಯಲ್ಲಿ ಭಾರೀ ಕುಸಿತ ಸಂಭವಿಸಿರುವುದರ ನಡುವೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಪ್ರತಿಸುಂಕ ಘೋಷಣೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದ್ದಾರೆ.

ಅನಾರೋಗ್ಯ ಗುಣಪಡಿಸಲು ಔಷಧ ತೆಗೆದುಕೊಳ್ಳುವ ಹಾಗೆ ಕೆಲವೊಮ್ಮೆ ಏನನ್ನಾದರೂ ಸರಿಪಡಿಸುವ ಮೊದಲು ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
“ಐರೋಪ್ಯ ರಾಷ್ಟ್ರಗಳ ಸಹಿತ ವಿಶ್ವದ ಅನೇಕ ನಾಯಕರೊಂದಿಗೆ ಮಾತನಾಡಿದ್ದೇನೆ. ಅವರೆಲ್ಲರೂ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಪ್ರಸ್ತುತ ವಿಶ್ವದ ರಾಷ್ಟ್ರಗಳು ತೆಗೆದುಕೊಂಡಿರುವ ನಿರ್ಧಾರದಿಂದ ಈ ನಷ್ಟ ಸಂಭವಿಸಿದೆ. ಮಾರುಕಟ್ಟೆಯಲ್ಲಿ ನಷ್ಟವಾಗುವುದನ್ನು ನಾನೂ ಬಯಸುವುದಿಲ್ಲ. ಆದರೆ ಇದನ್ನು ಸರಿಪಡಿಸಬೇಕಿದ್ದರೆ ಒಂದಷ್ಟು ದಿನ ನಷ್ಟವನ್ನು ಸಹಿಸಿಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ ಟ್ರಂಪ್.