ದ್ವೇಷ ಭಾಷಣ: ಹಲವು ಪ್ರಕರಣ ಹಿಂಪಡೆಯಲು ನಿರ್ಧರಿಸಿದ ರಾಜ್ಯ ಸರ್ಕಾರ..!
ಬೆಂಗಳೂರು: ಹಿಂದೂ ಸಮಾಜೋತ್ಸವ, ಜನಜಾಗೃತಿ ಸಮಾವೇಶ ಮತ್ತು ‘ಲವ್ ಜಿಹಾದ್’ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಕೋಮುದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಗದೀಶ ಕಾರಂತ ಹಾಗೂ ಕೆಲವು ಹಿಂದುತ್ವ ಸಂಘಟನೆಗಳ ಪ್ರಮುಖರ ವಿರುದ್ಧ ದಾಖಲಾಗಿದ್ದ ಒಟ್ಟು 34 ಮೊಕದ್ದಮೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
‘ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮತ್ತು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಈ ಮೊಕದ್ದಮೆಗಳನ್ನು ಹಿಂಪಡೆಯಬಾರದು’ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿ, ಐಜಿಪಿ), ಅಭಿಯೋಗ ಹಾಗೂ ಸರ್ಕಾರಿ ವ್ಯಾಜ್ಯಗಳ ಇಲಾಖೆ ಮತ್ತು ಕಾನೂನು ಇಲಾಖೆ ಅಭಿಪ್ರಾಯ ನೀಡಿದ್ದವು. ಆದರೂ ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ. ಈ ಪೈಕಿ, ರೈತರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸಚಿವರು, ಶಾಸಕರು ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು.