ಕಂದಕಕ್ಕೆ ಉರುಳಿ ಬಿದ್ದ ಬಸ್, 20 ಮಂದಿ ಸಾವು
ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 20 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ನ.4ರಂದು ನಡೆದಿದೆ.

ಬಸ್ ನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಗರ್ವಾಲ್‌ನಿಂದ ಕುಮೌನ್’ಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ.
ರಕ್ಷಣಾ ಪಡೆಗಳು ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರಲ್ಲಿ ಹೆಚ್ಚು ಮಕ್ಕಳು ಎನ್ನಲಾಗುತ್ತಿದೆ. ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂಗೊಂಡಿದೆ .
ಘಟನಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಡಳಿತ ಮಂಡಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.