ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಂಡ್ಯದ ಅಲ್ತಾಫ್
ವ್ಯಕ್ತಿಯೋರ್ವರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಕೇರಳದಿಂದ ಖರೀದಿ ಮಾಡಿದ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂ.ಬಹುಮಾನ ಗೆದ್ದುಕೊಂಡಿರುವ ಈ ವ್ಯಕ್ತಿಯ ಅದೃಷ್ಟ ಒಂದು ರಾತ್ರಿ ಬೆಳಗಾಗುವುದರೊಳಗೆ ಬದಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ ನಿವಾಸಿಯಾದ ಅಲ್ತಾಫ್ ಪಾಷಾ ಎಂಬವರು ಕೇರಳ ರಾಜ್ಯದ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದಿದ್ದಾರೆ.
ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, ಇತ್ತೀಚೆಗೆ ಕೇರಳಕ್ಕೆ ಹೋಗಿದ್ದಾಗ 500 ರೂ ಕೊಟ್ಟು ಲಾಟರಿ ಖರೀದಿಸಿದ್ದರು. ಅವರು ಇದೀಗ 25 ಕೋಟಿ ರೂ. ಗೆದ್ದಿದ್ದಾರೆ.
ಲಾಟರಿಯಲ್ಲಿ ಹಣ ಗೆದ್ದಿರುವುದು ಅತೀವ ಖುಷಿ ನೀಡಿದೆ. ಮ್ಯಾಕ್ಯಾನಿಕ್ ಕೆಲಸ ಬಿಟ್ಟು ಬೇರೆ ಬಿಸಿನೆಸ್ ಮಾಡಬೇಕು ಅಂದುಕೊಂಡಿದ್ದೇನೆ. ಒಂದು ಮನೆ ಖರೀದಿ ಮಾಡಬೇಕು, ಅದ್ದೂರಿಯಾಗಿ ಮಗಳ ಮದುವೆ ಮಾಡಬೇಕು ಅಂದುಕೊಂಡಿದ್ದೇನೆ ಎಂದು ಅಲ್ತಾಫ್ ತಿಳಿಸಿದ್ದಾರೆ.
ಮೊದಲಿಗೆ ನಮಗೆ ನಂಬಿಕೆಯೆ ಇರಲಿಲ್ಲ. ಇಷ್ಟು ವರ್ಷ ಲಾಟರಿ ತೆಗೆದುಕೊಳ್ಳುವ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಆಗಿದೆ. ಲಾಟರಿ ತೆಗೆದುಕೊಳ್ಳುವುದು ಬೇಡ ಅಂತ ನಾವು ಹೇಳುತ್ತಿದ್ದೆವು. ಇದೀಗ ಲಾಟರಿ ಗೆದ್ದಿರುವುದು ಖುಷಿಯಾಗಿದೆ. ಸ್ವಲ್ಪ ಸಾಲ ಇದೆ ಅದನ್ನು ತೀರಿಸಿ ಮನೆ ತೆಗೆದುಕೊಳ್ಳಬೇಕು ಎಂದು ಅಲ್ತಾಫ್ ಪತ್ನಿ ಹಾಗೂ ಪುತ್ರಿ ಸಂತೋಷದಲ್ಲಿ ಹೇಳಿಕೊಂಡಿದ್ದಾರೆ.