ಕರಾವಳಿಕ್ರೈಂ

ಉದ್ಯಮಿಯ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಆರೋಪಿಗಳು ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್ ನಡೆಸಿದ ಪರಿಣಾಮ ಮುಮ್ತಾಜ್ ಅಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು ಈ ಬಗೆಗಿನ ಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳು ಸಮಾಜದಲ್ಲಿ ಒಳ್ಳೆಯವರ ರೀತಿಯಲ್ಲಿ ಫೋಸು ಕೊಡುತ್ತಾ ಮಾಡಬಾರದ ಕೆಲಸವನ್ನು ಮಾಡಿದ್ದಾರೆ ಎಂದು ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.

ಆರೋಪಿ ಸತ್ತಾರ್ ಎಂಬಾತನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದು ಮತ್ತೋರ್ವ ಆರೋಪಿ ಶಾಫಿಯನ್ನು ಧಾರ್ಮಿಕ ಸಂಘಟನೆಯೊಂದರ ಪದಾಧಿಕಾರಿ ಹುದ್ದೆಯಿಂದ ವಜಾಗೊಳಿಸಿ ಸಂಸ್ಥೆಯಿಂದಲೇ ಉಚ್ಛಾಟಿಸಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿಗಳ ಪೈಕಿ ಓರ್ವ ಸಮಾಜ ಸೇವಕರೋರ್ವರ ಸಹೋದರ ಎನ್ನಲಾಗುತ್ತಿದ್ದು ಇನ್ನೋರ್ವ ಧಾರ್ಮಿಕ ಕ್ಷೇತ್ರದಲ್ಲಿ ಹುದ್ದೆಯೊಂದನ್ನು ಅಲಂಕರಿಸಿದ್ದ. ಧಾರ್ಮಿಕ ಪ್ರಭಾಷಣದ ವೇದಿಕೆಗಳಲ್ಲೂ ಕಾಣಿಸಿಕೊಳ್ಳುತ್ತಾ ಒಳ್ಳೆಯವರ ರೀತಿಯ ಮುಖವಾಡ ಧರಿಸಿದ್ದರು,. ಇದೀಗ ಅವರ ಆ ಮುಖವಾಡ ಕಳಚಿದ್ದು ದುಡ್ಡಿನ ಆಸೆಗೆ ಬಿದ್ದು ಉದ್ಯಮಿಯ ಜೀವವೇ ಕೊನೆಗೊಳ್ಳಲು ಕಾರಣರಾದ ಕಳಂಕವನ್ನು ಅಂಟಿಸಿಕೊಂಡು ಪೊಲೀಸರ ವಶವಾಗಿದ್ದಾರೆ, ಆರೋಪಿಗಳ ವಿರುದ್ಧ ಕಠಿನ ಕ್ರಮ ಆಗಲೇಬೇಕೆಂದು ಭಾರೀ ಆಗ್ರಹ ವ್ಯಕ್ತವಾಗಿದೆ.

ಮುಮ್ತಾಜ್ ಅಲಿಯವರಿಗೆ ಪದೇ ಪದೇ ಕಿರುಕುಳ ನೀಡಿದ ಕಾರಣಕ್ಕೆ ಅವರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದ್ದು ಮಹಿಳೆಯನ್ನು ಉಪಯೋಗಿಸಿಕೊಂಡು ದುಡ್ಡಿನ ಆಸೆಗಾಗಿ ಮುಮ್ತಾಜ್ ಅಲಿಯವರ ಹಿಂದೆ ಬಿದ್ದಿದ್ದರು. ಮುಮ್ತಾಜ್ ಅಲಿಯವರಿಂದ ದೊಡ್ಡ ಮೊತ್ತದ ಹಣ ಬೇಡಿಕೆ ಇಡುವುದರ ಜೊತೆಗೆ ಇತರ ವಿಚಾರಗಳಲ್ಲೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಖತರ್ನಾಕ್ ಗ್ಯಾಂಗ್‌ನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು ಖತರ್ನಾಕ್ ಗ್ಯಾಂಗ್‌ನ ಕುಕೃತ್ಯಕ್ಕೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಆಗ್ರಹ ಎಲ್ಲೆಡೆಯಿಂದ ಕೇಳಿ ಬರುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಆಗ್ರಹ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!