ಕೇರಳ: ನಿವೃತ್ತ ಡಿಜಿಪಿ ಆರ್.ಶ್ರೀಲೇಖಾ ಬಿಜೆಪಿಗೆ ಸೇರ್ಪಡೆ
ತಿರುವನಂತಪುರ: ಕೇರಳ ಕೇಡರ್‌ನ ಮೊದಲ ಮಹಿಳಾ ಐಪಿಎಸ್ ಅಧಿಕಾರಿ, ನಿವೃತ್ತ ಡಿಜಿಪಿ ಆರ್.ಶ್ರೀಲೇಖಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್, ಜಿಲ್ಲಾ ಘಟಕದ ಅಧ್ಯಕ್ಷ ವಿ.ವಿ. ರಾಜೇಶ್ ಸಮಕ್ಷಮದಲ್ಲಿ ಸದಸ್ಯತ್ವ ಪಡೆದರು. ಪ್ರಧಾನಿ ಮೋದಿಯವರ ವರ್ಚಸ್ಸು ಬಿಜೆಪಿ ಸೇರುವಂತೆ ನನ್ನ ಮೇಲೆ ಪ್ರಭಾವ ಬೀರಿದೆ. ಪಕ್ಷದಿಂದ ಏನನ್ನೂ ಬಯಸುವುದಿಲ್ಲ. ಜನಸೇವೆಗೆ ಸಿಕ್ಕ ಮತ್ತೊಂದು ಅವಕಾಶವಿದು. ಜನರಿಗಾಗಿ ಕೆಲಸ ಮಾಡುವೆ’ ಎಂದು ಶ್ರೀಲೇಖಾ ಹೇಳಿದರು.
‘ಪೊಲೀಸ್ ಅಧಿಕಾರಿಯಾಗಿ ಕಳಂಕರಹಿತ ದಾಖಲೆ ಹೊಂದಿರುವ ನಿವೃತ್ತ ಡಿಜಿಪಿಯ ಅನುಭವವು ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ. 2026ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ನಾವು ಶ್ರಮಿಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದರು.