ಪುತ್ತೂರು: ಈಶ್ವರಮಂಗಲದಲ್ಲಿ ಪ್ರವಾದಿ ನಿಂದನಾತ್ಮಕ ಭಿತ್ತಿಪತ್ರ ಪ್ರಕರಣ: ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಶಾಸಕರ ಸೂಚನೆ
ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪುಳಿತ್ತಡಿ ಎಂಬಲ್ಲಿ ಬಸ್ ತಂಗುದಾಣದಲ್ಲಿ ಪ್ರವಾದಿಯವರನ್ನು ನಿಂದಿಸಿ ಭಿತ್ತಿ ಪತ್ರ ಅಂಟಿಸಲಾಗಿದ್ದು, ಇದು ಸಮಾಜದಲ್ಲಿ ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳ ಕೃತ್ಯವಾಗಿ ಇಂಥಹ ಶಕ್ತಿಗಳನ್ನು ಮಟ್ಟಹಾಕುವಂತೆ ಶಾಸಕ ಅಶೋಕ್ ರೈ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಪ್ರವಾದಿಯವರನ್ನು ನಿಂದಿಸಿ ಭಿತ್ತಿ ಪತ್ರ ಅಂಟಿಸಿರುವ ಆರೋಪಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮತ್ತು ಆರೋಪಿಗಳನ್ನು ಬಂಧಿಸಿ ಶಾಂತಿ ಕಾಪಾಡುವಂತೆ ಈಶ್ವರಮಂಗಲ ಮುಸ್ಲಿಂ ಒಕ್ಕೂಟದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಶಾಂತಿಯುತವಾಗಿರುವ ಪುತ್ತೂರಿನಲ್ಲಿ ಏನಾದರೂ ಮಾಡಿ ಗಲಭೆ ಎಬ್ಬಿಸಬೇಕು ಎಂಬ ಉದ್ದೇಶದಿಂದ ಕೆಲವೊಂದು ಕಿಡಿಗೇಡಿಗಳು ಧಾರ್ಮಿಕ ಮಹಾನ್ ವ್ಯಕ್ತಿಗಳಿಗೆ ನಿಂದನೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಂಥವರಿಗೆ ತಕ್ಕ ಶಾಸ್ತಿಯಾಗಬೇಕು, ಪೊಲೀಸ್ ಇಲಾಖೆ ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಧರ್ಮದ ವಿಚಾರದಲ್ಲಿ ಜನರ ಭಾವನೆ ಕೆರಳಿಸುವ ಯಾರೇ ಆಗಲಿ ಬಂಧಿಸಿ ಮಟ್ಟ ಹಾಕಿ ಎಂದು ಸೂಚನೆ ನೀಡಿದರು.