ಅಮ್ಮಾ ನಾನು ಚಿಪ್ಸ್ ಕದ್ದಿಲ್ಲ…ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಬಾಲಕ!
“ನಾನು ಚಿಪ್ಸ್ ಕದ್ದಿಲ್ಲ ಅಮ್ಮ” ಎಂದು ಡೆತ್ ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಈ ಕುರಿತು ಮೃತ ಬಾಲಕನ ಕುಟುಂಬಸ್ಥರು ಮಾಹಿತಿ ನೀಡಿದ್ದು, ಕಳೆದ ಭಾನುವಾರ ತಿಂಡಿ ಖರೀದಿಸಲೆಂದು ಬಾಲಕ ಅಂಗಡಿಗೆ ಹೋಗಿದ್ದ. ಆ ಸಮಯದಲ್ಲಿ ಅಂಗಡಿಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅಂಗಡಿಯ ಹೊರಗಿದ್ದ ಚಿಪ್ಸ್ ಪ್ಯಾಕೆಟ್ ನೋಡಿ, ಅದನ್ನು ಎತ್ತಿಕೊಂಡು ಹೋಗಿದ್ದಾನೆ ಎಂದು ಆತನ ಮೇಲೆ ಆರೋಪ ಹೊರಿಸಲಾಗಿತ್ತು. ಈ ಘಟನೆ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ನಡೆದಿದೆ.
ಆದರೆ ನಿಜ ಏನೆಂದರೆ ಅಂಗಡಿಯ ಬಳಿ ಹೋದ ಬಾಲಕ ಚಿಪ್ಸ್ ಕೊಡುವಂತೆ ಮಾಲೀಕನ ಬಳಿ ಕೇಳಿದ್ದಾನೆ. ಆದರೆ, ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅಂಗಡಿಯಲ್ಲಿ ಯಾರು ಇಲ್ಲ ಎಂದುಕೊಂಡು ಹಾಗೆಯೇ ಹೊರಟಿದ್ದ. ಆಗ ಕಾಲು ಬಳಿ ಬಿದ್ದಿದ್ದ ಚಿಪ್ಸ್ ಪ್ಯಾಕೆಟ್‌ಗಳನ್ನು ಎತ್ತಿಕೊಂಡಿದ್ದ. ಇದನ್ನು ನೋಡಿದ್ದೇ ತಡ ಮಾಲೀಕ ಸೈಕಲ್‌ನಲ್ಲಿ ಆತನನ್ನು ಬೆನ್ನಟ್ಟಿಸಿಕೊಂಡು ಹೋಗಿದ್ದಾನೆ. ಆಗ ಬಾಲಕ ಮಾಲೀಕನಿಗೆ ಕ್ಷಮೆ ಕೇಳಿದ್ದ. ಬಳಿಕ ಬಾಲಕನನ್ನು ಅಂಗಡಿಗೆ ಎಳೆದುಕೊಂಡ ಹೋದ ಮಾಲೀಕ ಬಾಲಕನನ್ನು ಬಿಡದೇ ಸಾರ್ವಜನಿಕರ ಮುಂದೆ ಎಳೆದೊಯ್ದು, ಕಪಾಳಮೋಕ್ಷ ಮಾಡಿ ಅವಮಾನಿಸಿದ್ದ ಎನ್ನಲಾಗಿದೆ, ಬಸ್ಕಿಯೂ ತೆಗೆಸಿದ್ದ ಎಂದೂ ಹೇಳಲಾಗುತ್ತಿದೆ.
ನನ್ನನ್ನು ಕ್ಷಮಿಸು ಅಮ್ಮ ಎಂದು ಡೆತ್ ನೋಟ್
ಈ ಘಟನೆಯ ಬಗ್ಗೆ ತಿಳಿದ ಮೃತ ಬಾಲಕನ ತಾಯಿ, ಮತ್ತೆ ಆತನನ್ನು ಅಂಗಡಿಯ ಬಳಿ ಕರೆದೊಯ್ದು ಗದರಿಸಿದ್ದರು. ಮನೆಗೆ ಬಂದವನೇ ಬಾಗಿಲು ಹಾಕಿಕೊಂಡು ಕೋಣೆಯೊಳಗೆ ಹೋಗಿ, ”ನಾನು ಚಿಪ್ಸ್ ಕದ್ದಿಲ್ಲ ಅಮ್ಮ, ನನ್ನನ್ನು ಕ್ಷಮಿಸು,” ಎಂದು ಬರೆದಿಟ್ಟು, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.