ಅಮ್ಮನನ್ನು ರಕ್ಷಿಸಲು ರಿಕ್ಷಾವನ್ನೇ ಎತ್ತಿದ ಬಾಲಕಿಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ
ಬೆಂಗಳೂರು: ಮಂಗಳೂರಿನ ಮುಲ್ಕಿ ಸಮೀಪ ಕಿನ್ನಿಗೋಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದಾಗ ತಾಯಿಯನ್ನು ಉಳಿಸಲು ಮಗಳು ಆಟೋರಿಕ್ಷಾವನ್ನೇ ಎತ್ತಿದ ವಿಡಿಯೋ ಬಹಳ ವೈರಲ್ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ಬಂದಿದೆ. ಬಾಲಕಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಸಿದ್ದರಾಮಯ್ಯ ಕೊಂಡಾಡಿದ್ದಾರೆ.
ತಾಯಿ ಮತ್ತು ಮಗಳು ರಸ್ತೆ ದಾಟುತ್ತಿದ್ದಾಗ ತಾಯಿ ಎದುರಿನಿಂದ ಬರುತ್ತಿದ್ದ ರಿಕ್ಷಾ ಗಮನಿಸದೆ ಮುಂದೆ ಹೋಗಿದ್ದಾರೆ. ಮಗಳು ಕೆಲವು ಹೆಜ್ಜೆ ಹಿಂದೆ ಉಳಿದಿದ್ದಳು. ವೇಗವಾಗಿ ಬಂದ ರಿಕ್ಷಾವೊಂದು ಮಹಿಳೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಮಹಿಳೆ ಅದರಡಿ ಸಿಕ್ಕಿಬಿದ್ದಿದ್ದರು. ಒಂದು ಕ್ಷಣವನ್ನೂ ವ್ಯರ್ಥ ಮಾಡದ ಮಗಳು ಓಡಿಬಂದು ಆಟೋರಿಕ್ಷಾವನ್ನೇ ಎತ್ತಿದ್ದಾಳೆ. ರಿಕ್ಷಾ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ಆಕೆಗೆ ಸಹಾಯ ಮಾಡಿದ್ದಾರೆ. ಈ ವಿಡಿಯೋ ಅಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇದು ಲಕ್ಷಾಂತರ ವೀಕ್ಷಣೆ ಕೂಡಾ ಪಡೆದುಕೊಂಡಿತ್ತು. ಬಾಲಕಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿಡಿಯೋ ನೋಡಿ ಬಾಲಕಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದೆ, ಅಲ್ಲೇ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಯಾರ ಸಹಾಯಕ್ಕೂ ಕಾಯದೆ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಬಾಲಕಿಯ ಸಮಯಪ್ರಜ್ಞೆ, ಧೈರ್ಯ ಶ್ಲಾಘನೀಯ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಪಘಾತ ಸಂಭವಿಸಿದ ಸ್ಥಳಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಜನರು ಸುತ್ತಲೂ ನಿಂತು ಮೊಬೈಲ್ ಮೂಲಕ ವಿಡಿಯೋ ಮಾಡುವುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಕಂಡಿದ್ದೆ, ಇದು ಭವಿಷ್ಯದ ದಿನಗಳ ಬಗ್ಗೆ ನನ್ನಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ ಎಂದು ಹೇಳಿದ್ದಾರೆ.
ಅಪಘಾತ, ಬೆಂಕಿ ಅನಾಹುತ, ಹೃದಯಾಘಾತ ಇಂತಹ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪಾಲಿಗೆ ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಈ ವೇಳೆ ಮಾನವೀಯತೆ ಮರೆಯದಿರಿ ಎಂದಿದ್ದಾರೆ.