ಸುಳ್ಯ: ಬಿಸಿ ನೀರು ಮೈಮೇಲೆ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ನಿಧನ
ಸುಳ್ಯ: ಆಲೆಟ್ಟಿ ಗ್ರಾಮದ ಕುದ್ಕುಳಿ ಎಂಬಲ್ಲಿ ಮನೆಯಲ್ಲಿ ಸ್ನಾನಕ್ಕೆ ಬಿಸಿ ಮಾಡಿದ್ದ ನೀರು ಬಚ್ಚಿಲು ಮನೆಗೆ ಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು ಮೈ ಮೇಲೆ ಬಿಸಿ ನೀರು ಚೆಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತಪಟ್ಟ ಯುವತಿ ಆಲೆಟ್ಟಿಯ ಕುದ್ಕುಳಿ ದಿ.ಸುಬ್ರಾಯ ರವರ ಪುತ್ರಿ ಕು.ರೇಖಾ (35)ಎಂದು ತಿಳಿದು ಬಂದಿದೆ. 3 ವಾರದ ಹಿಂದೆ ಮನೆಯಲ್ಲಿ ಬಿಸಿ ನೀರಿನ ಪಾತ್ರೆಯನ್ನು ಒಲೆಯಿಂದ ತೆಗೆದು ಮನೆಯ ಹೊರಗಡೆ ಇದ್ದ ಬಚ್ಚಲು ಮನೆಗೆ ಕೊಂಡು ಹೋಗುವಾಗ ಆಕಸ್ಮತ್ತಾಗಿ ಕಾಲು ಜಾರಿ ಬಿದ್ದಾಗ ಪಾತ್ರೆಯಲ್ಲಿದ್ದ ಬಿಸಿ ನೀರು ಮೈಮೇಲೆ ಬಿತ್ತು. ಆ ಸಂದರ್ಭದಲ್ಲಿ ಮನೆಯಲ್ಲಿ ಯುವತಿಯ ತಾಯಿ ಮತ್ತು ಅಕ್ಕ ಮಾತ್ರ ಇದ್ದರು. ಸ್ಥಳೀಯರು ವಿಷಯ ತಿಳಿದು ತಕ್ಷಣ ಸುಳ್ಯದ ಸರಕಾರಿ ಆಸ್ಪತ್ರೆಗೆ ಯುವತಿಯನ್ನು ಕರೆ ತಂದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ದಿನ ಕಳೆದಂತೆ ಬಿಸಿ ನೀರು ಬಿದ್ದು ಗುಳ್ಳೆ ಬಂದ ಭಾಗಗಳಲ್ಲಿ ಒಡೆದು
ರಕ್ತಸೋರಲಾರಂಭಿಸಿದ್ದರಿಂದಾಗಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ವೈದ್ಯರ ಸಲಹೆ ಮೇರೆಗೆ ಜೂ .13 ರಂದು ಯುವತಿಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಗುಳ್ಳೆಗಳು ಬಂದ ಭಾಗದಿಂದ ಮತ್ತಷ್ಟು ವಿಪರೀತ ರಕ್ತ ಸೋರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.