ಬೆಳ್ತಂಗಡಿ: ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ
ಬೆಳ್ತಂಗಡಿ: ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಬೆಳ್ತಂಗಡಿ ಠಾಣಾ ಪೊಲೀಸರು ಸಾವಿರಾರು ಮೊತ್ತದ ನಗದು ಸಹಿತ 7 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ಕಸಬಾ ಗ್ರಾಮದ ನಿವಾಸಿ ಗಣೇಶ್ (62), ಕೊಯ್ಯೂರು ಗ್ರಾಮದ ನಿವಾಸಿ ದಿನೇಶ್ (42), ಲಾಯಿಲ ಗ್ರಾಮದ ನಿವಾಸಿ ಅಜಯ್ (31), ನಡ ಗ್ರಾಮದ ನಿವಾಸಿ ರವಿ ಪ್ರಕಾಶ್ (52), ಲಾಯಿಲ ನಿವಾಸಿ ಸುಬ್ರಮಣ್ಯ (34), ಕಸಬಾ ಗ್ರಾಮದ ನಿವಾಸಿ ಗಂಗಾಧರ ಹಾಗೂ ಲಾಯಿಲ ನಿವಾಸಿ ಸುಬ್ರಮಣ್ಯ ಎಂದು ಹೆಸರಿಸಲಾಗಿದೆ.
ಬೆಳ್ತಂಗಡಿ ಕಸಬಾ ಗ್ರಾಮದ ಸುದೆಮುಗೇರು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಖಚಿತ ಮಾಹಿತಿ ಮೇರೆಗೆ ಭಾನುವಾರ ಸಂಜೆ ದಾಳಿ ನಡೆಸಿದ ಬೆಳ್ತಂಗಡಿ ಠಾಣಾ ಪಿಎಸ್ಸೈ ಚಂದ್ರಶೇಖರ್ ಎ ಎಂ ಅವರ ನೇತೃತ್ವದ ಪೊಲೀಸರು ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ತಡೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಇಸ್ಪೀಟು ಎಲೆಗಳು, 11,730/- ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ದ ನ್ಯಾಯಾಲಯದ ಅನುಮತಿ ಪಡೆದು ಮಂಗಳವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.