ಕರಾವಳಿ

ಕಾರ್ಯಕರ್ತನ ಮೃತದೇಹಕ್ಕೆ ಹೆಗಲು ಕೊಟ್ಟ ಶಾಸಕರು…



ಜೂ.11ರಂದು ಸಂಜೆ ಮೃತಪಟ್ಟ ಉದ್ಯಮಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ ಅವರ ಮೃತದೇಹ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿತ್ತು. ಜೂ.12ರಂದು ಬೆಳಿಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಆಸ್ಪತ್ರೆಗೆ ಬಂದು ತಾವೇ ನೇತೃತ್ವ ವಹಿಸಿ ಎಲ್ಲ ಸಿದ್ದತೆಗಳನ್ನು ನಡೆಸಿದ್ದರು. ಸ್ವತಃ ತಾವೇ ಹೆಗಲು ಕೊಟ್ಟು ತೆರೆದ ವಾಹನ ಒಳಗೆ ಮೃತದೇಹ ಸಾಗಿಸಲು ನೆರವಾದರು.

ಬಳಿಕ ಮೃತದೇಹದ ಮೆರವಣಿಗೆ ವೇಳೆಯೂ ಎಲ್ಲವನ್ನೂ ನಿಭಾಯಿಸಿಕೊಂಡು ಶಾಸಕರು ಸಾಗುತ್ತಿದ್ದುದು ಕಂಡು ಬಂತು. ಮೃತದೇಹ ಪ್ರಕಾಶ್ ಅವರ ಮನೆ ತಲುಪಿದಾಗಲೂ ವಾಹನದಿಂದ ಮೃತದೇಹವನ್ನು ಹೊರೆ ತೆಗೆಯುವ ವೇಳೆ ಮತ್ತು ಆ ಬಳಿಕ ಅಂತಿಮ ದರ್ಶನದ ಸಂದರ್ಭದಲ್ಲಿ ಶಾಸಕರು ಮುಂಚೂಣಿಯಲ್ಲಿದ್ದುಕೊಂಡು ಎಲ್ಲ ಕಾರ್ಯಗಳನ್ನು ನಿಭಾಯಿಸುತ್ತಿದ್ದರು. ಅಂತಿಮ ದರ್ಶನ ಪಡೆಯಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಈ ವೇಳೆ ಮೃತದೇಹದ ಬಳಿಯೇ ನಿಂತುಕೊಂಡಿದ್ದ ಶಾಸಕರು ಜನರನ್ನು ನಿಯಂತ್ರಿಸುತ್ತಿದ್ದುದೂ ಕಂಡು ಬಂತು.

ಆ ಬಳಿಕ ಮೃತದೇಹವನ್ನು ನರಿಮೊಗರು ಹಿಂದೂ ರುದ್ರಭೂಮಿಗೆ ಕೊಂಡೊಯ್ಯುವ ವೇಳೆಯೂ ಆರಂಭದಲ್ಲಿ ಮೃತದೇಹಕ್ಕೆ ಹೆಗಲು ಕೊಟ್ಟ ಶಾಸಕರು ಬಳಿಕ ಮೃತದೇಹವನ್ನು ದಫನ ಮಾಡುವಾಗಲೂ ಅಲ್ಲೇ ಇದ್ದುಕೊಂಡು ಸಹಕಾರ ನೀಡುತ್ತಿದ್ದುದು ಕಂಡು ಬಂತು. ಮಾತ್ರವಲ್ಲದೇ ಮೃತ ಪ್ರಕಾಶ್ ಅವರನ್ನು ನೆನೆದು ಶಾಸಕರು ಕಣ್ಣೀರು ಹಾಕಿದರು. ಒಟ್ಟಿನಲ್ಲಿ ಪಕ್ಷದ ಕಾರ್ಯಕರ್ತನೊಬ್ಬ ಅಗಲಿದಾಗ ತಾನು ಶಾಸಕ ಎನ್ನುವ ವಿಚಾರವನ್ನು ಬದಿಗೊತ್ತಿ ಒಬ್ಬ ಮನೆಮಗನಂತೆ ನಿಂತುಕೊಂಡು ಎಲ್ಲವನ್ನೂ ನಿಭಾಯಿಸಿದ ಶಾಸಕ ಅಶೋಕ್ ಕುಮಾರ್ ಅವರ ನಡೆ ಮಾದರಿಯೆನಿಸಿತ್ತು.

Leave a Reply

Your email address will not be published. Required fields are marked *

error: Content is protected !!