ಕರಾವಳಿರಾಜ್ಯ

ಮಾರ್ಚ್‌ನಲ್ಲಿ ಸರಕಾರದಿಂದ 3000 ಪವರ್‌ಮ್ಯಾನ್‌ಗಳ ನೇಮಕಾತಿ: ತರಬೇತಿಗೆ ಸಜ್ಜುಗೊಳಿಸಲು ಶಾಸಕ ಅಶೋಕ್‌ ರೈಯವರಲ್ಲಿ ಸೂಚಿಸಿದ ಸಚಿವ ಕೆ ಜೆ ಜಾರ್ಜ್ಪುತ್ತೂರು: ಮಾರ್ಚ್ ತಿಂಗಳಲ್ಲಿ 3000 ಮೆಸ್ಕಾಂ ಪವರ್‌ಮ್ಯಾನ್‌ಗಳ ನೇಮಕಾತಿ ನಡೆಯಲಿದ್ದು ಇದಕ್ಕಾಗಿ ಅಭ್ಯರ್ಥಿಗಳಿಗೆ ತರಬೇತಿ ಸಜ್ಜುಗೊಳಿಸುವ ವ್ಯವಸ್ಥೆ ಮಾಡುವಂತೆ ಇಂಧನ ಸಚಿವ ಕೆ ಜೆ ಜಾರ್ಜ್ ರವರು ಪುತ್ತೂರು ಶಾಸಕರಾದ ಅಶೋಕ್ ರೈಯವರಲ್ಲಿ ವಿನಂತಿಸಿದ್ದಾರೆ.

ಮಂಗಳೂರು ಮೆಸ್ಕಾಂ ಭವನದಲ್ಲಿ ಫೆ.5ರಂದು ನಡೆದ ಸಭೆಯಲ್ಲಿ ಸಚಿವರು ಈ ಸೂಚನೆಯನ್ನು ನೀಡಿದ್ದಾರೆ.

ಪವರ್‌ಮ್ಯಾನ್‌ಗಳ ಕೊರತೆಯ ಬಗ್ಗೆ ಸಚಿವರ ಗಮನಸೆಳೆದ ಪುತ್ತೂರು ಶಾಸಕರಾದ ಅಶೋಕ್ ರೈಯವರು ದ ಕ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಪುತ್ತೂರಿನಲ್ಲಿಯೂ ಪವರ್‌ಮ್ಯಾನ್‌ಗಳ ಕೊರತೆ ಇದೆ. ಪವರ್ ಮ್ಯಾನ್ ಕೆಲಸ ಪಡೆದುಕೊಂಡ ಘಟ್ಟದವರು ಇಲ್ಲಿ ಬಂದು ಎರಡರಿಂದ ಮೂರು ವರ್ಷ ಕೆಲಸ ಮಾಡಿ ಬಳಿಕ ಅವರ ಊರಿನ ಶಾಸಕರಿಂದ ಪತ್ರವನ್ನು ಪಡೆದು ಅವರ ಊರಿಗೆ ಮರಳುತ್ತಾರೆ. ಹೆಚ್ಚಿನವರು ಇದೇ ರೀತಿ ಮಾಡುವುದರಿಂದ ಈ ಭಾಗದಲ್ಲಿ ಪವರ್ ಮ್ಯಾನ್ ಕೊರತೆ ಉಂಟಾಗುತ್ತಿದೆ. ದ ಕ ಜಿಲ್ಲೆಯವರು ಪವರ್‌ಮ್ಯಾನ್ ಕೆಲಸಕ್ಕೆ ಅರ್ಜಿ ಹಾಕುವುದೇ ಕಡಿಮೆಯಾಗಿದೆ. ಈ ಕಾರಣಕ್ಕೆ ಅವರಿಗೆ ತರಬೇತಿ ನೀಡಿ ಅವರನ್ನು ಪವರ್ ಮ್ಯಾನ್ ಹುದ್ದಗೆ ನೇಮಕಾತಿ ಮಾಡಿಕೊಳ್ಳಬೇಕಿದೆ. ಆಸಕ್ತಿ ಇರುವ ಅಭ್ಯರ್ಥಿಗಳಿಗೆ ನಾನು ನನ್ನ ಟ್ರಸ್ಟ್ ಮೂಲಕ ತರಬೇತಿ ನೀಡುತ್ತೇನೆ ಇಲಾಖೆಯಿಂದ ತರಬೇತಿಗೆ ಬೇಕಾದ ವ್ಯವಸ್ಥೆಗಳನ್ನು ಜೋಡನೆ ಮಾಡಬೇಕು ಎಂದು ಸಚಿವರಲ್ಲಿ ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವರು ಒಟ್ಟು 6 ಸಾವಿರ ಪವರ್‌ಮ್ಯಾನ್‌ಗಳ ಬೇಡಿಕೆ ಇದೆ ಆದರೆ ಒಮ್ಮೆಲೆ 6 ಸಾವಿರ ಮಂದಿಯನ್ನು ನೇಮಕಾತಿ ಮಾಡಲು ಕಾನೂನಿನ ತೊಡಕು ಇದೆ ಆರಂಭದಲ್ಲಿ ಮೂರು ಸಾವಿರ ಮಂದಿಯನ್ನು ನೇಮಕಾತಿ ಮಡುತ್ತೇವೆ, ನಿಮ್ಮ ಮೂಲಕವೇ ಕರಾವಳಿಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಆ ಮೂಲಕ ನಿಮ್ಮ ಊರಿನವರನ್ನೇ ಇಲ್ಲಿಗೆ ಪವರ್ ಮ್ಯಾನ್‌ಗಳಾಗಿ ನೇಮಕ ಮಾಡೋಣ ಎಂದು ಸೂಚಿಸಿದರು.

ಶಾಸಕರಿಗೆ ಶಹಬ್ಬಾಸ್ ಎಂದ ಸಚಿವರು: ಇದೇ ಮೊದಲ ಬಾರಿಗೆ ಪವರ್‌ಮ್ಯಾನ್‌ಗಳಿಗೆ ಕಂಬ ಹತ್ತುವ ಮತ್ತು ಇತರೆ ಕೆಲಸಗಳಿಗೆ ತಮ್ಮ ಟ್ರಸ್ಟ್ ಮೂಲಕ ಉಚಿತ ತರಬೇತಿ ನೀಡಿ ಅವರಿಗೆ ಉದ್ಯೋಗ ನೀಡಲು ಮುಂದಾಗಿದ್ದೀರಿ ನಿಮ್ಮ ಈ ಉತ್ಸಾಹಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಕೆ ಜೆ ಜಾರ್ಜ್ ಹೇಳಿದರು. ನೀವು ಈಗಾಗಲೇ ಕೆಎಸ್‌ಆರ್‌ಟಿಸಿಯಲ್ಲಿ ಅನೇಕ ಮಂದಿಗೆ ತಾತ್ಕಾಲಿಕ ಚಾಲಕ ಕೆಲಸ ಕೊಡಿಸಿದ್ದೀರಿ ಎಂಬುದನ್ನು ತಿಳಿದುಕೊಂಡೆ ನಿಮ್ಮ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ನಿಮ್ಮ ಮುತುವರ್ಜಿಗೆ ಶಹಬ್ಬಾಸ್ ಎಂದು ಸಚಿವರು ಹೇಳಿದರು.

ಪುತ್ತೂರು ನಗರ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಹಳೆಯ ಕಾಲದ ವಿದ್ಯುತ್ ತಂತಿಗಳು ಜೋತು ಬೀಳುತ್ತಿದೆ ಅವುಗಳನ್ನು ತೆರವು ಮಾಡಿ ಹೊಸ ತಂತಿಗಳನ್ನು ಅಳವಡಿಸುವಂತೆಯೂ ಶಾಸಕರು ಸಚಿವರಲ್ಲಿ ಮನವಿ ಮಾಡಿದರು. ವೇದಿಕೆಯಲ್ಲಿ ಕೆಪಿಟಿಸಿಎಲ್ ಎಂ ಡಿ ಪಂಕಜಕುಮಾರ್ ಪಾಂಡೆ, ಮೆಸ್ಕಾಂ ಎಂ ಡಿ ಪದ್ಮಾವತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!