ಕುವೈತ್: ಮಲಯಾಳಿ ಉದ್ಯಮಿಗೆ ಸೇರಿದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ; ಕನಿಷ್ಠ 35 ಮಂದಿ ಸಜೀವ ದಹನ
ಕುವೈತ್ ನಲ್ಲಿ ಮಲಯಾಳಿ ಉದ್ಯಮಿಗೆ ಸೇರಿದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 35 ಮಂದಿ ಸಜೀವ ದಹನವಾಗಿರುವ ಬಗ್ಗೆ ವರದಿಯಾಗಿದೆ. ಮೃತರಲ್ಲಿ ನಾಲ್ವರು ಭಾರತೀಯರಾಗಿದ್ದಾರೆ. ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಟ್ಟಡದಲ್ಲಿ ಅವಘಡ ಸಂಭವಿಸಿದೆ, ಈ ಕಟ್ಟಡದಲ್ಲಿರುವವರು ಹೆಚ್ಚಿನವರು ಮಲಯಾಳಿಗಳು ಎನ್ನಲಾಗಿದೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಎನ್ನಲಾಗಿದೆ.
ಅಡುಗೆ ಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ, ಬೆಂಕಿಯನ್ನು ಕಂಡು ಕೆಲವರು ಅಪಾರ್ಟ್ಮೆಂಟ್ನಿಂದ ಕೆಳಗೆ ಜಿಗಿದ ವೇಳೆ ಸಾವನ್ನಪ್ಪಿದ್ದಾರೆ, ಇನ್ನೂ ಕೆಲವರು ಬೆಂಕಿಯಲ್ಲೇ ಬೆಂದು ಕರಕಲಾಗಿದ್ದಾರೆ ಎನ್ನಲಾಗಿದೆ.
ಈ ಕಟ್ಟಡದಲ್ಲಿ ಸುಮಾರು 195 ಮಂದಿ ವಾಸಿಸುತ್ತಿದ್ದರು ಎನ್ನಲಾಗಿದ್ದು ಬೆಂಕಿಯನ್ನು ಹತೋಟಿಗೆ ತರಲಾಗಿದ್ದರೂ, ಇನ್ನೂ ಕೆಲವರು ಒಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.