ಸುಳ್ಯ: ಮನೆಯಿಂದ ಚಿನ್ನ ಕಳ್ಳತನ- ಕಿಟಕಿಯ ಸರಳು ಮುರಿದು ಮನೆ ಪ್ರವೇಶಿಸಿದ ಕಳ್ಳರು
ಸುಳ್ಯ: ಮನೆಯೊಂದರ ಕಿಟಕಿಯ ಸರಳು ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ರೂಮಿನ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವುಗೈದ ಘಟನೆ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮೂವಪ್ಪೆ ಎಂಬಲ್ಲಿ ನಡೆದಿದೆ.

ಮೂವಪ್ಪೆ ಎಂಬಲ್ಲಿನ ನಿವಾಸಿ ನಸೀರ ಐ ಎಚ್ (28ವ) ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ನಸೀರ ಅವರು ತನ್ನ ಮನೆಯಿಂದ ಇಂದ್ರಾಜೆಗೆ ಹೋಗಿದ್ದು ಮೂರು ದಿನದ ಬಳಿಕ ಮನೆಗೆ ಬಂದಾಗ ಬೆಡ್ ರೂಮಿನ ಬಾಗಿಲು ಒಳಗಡೆಯಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡ ಅವರು ಮನೆಯ ಬೆಡ್ ರೂಮಿನ ಕಿಟಕಿಯ ಬಳಿ ಬಂದು ನೋಡಿದಾಗ ಯಾರೋ ಕಳ್ಳರು ಕಿಟಕಿಯ ಬಾಗಿಲಿನ ಗಾಜು ಮುರಿದು ಚಿಲಕ ತೆಗೆದು ಕಿಟಕಿಯ ಸರಳನ್ನು ಪಿಕ್ಕಾಸಿನಿಂದ ಮುರಿದು ಒಳ ನುಗ್ಗಿ ಬೆಡ್ ರೂಮಿನ ಗಾದ್ರೇಜ್ನಲ್ಲಿದ್ದ ಸುಮಾರು 1.48 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಚಿನ್ನವನ್ನು ಕಳವುಗೈದಿರುವುದು ಗೊತ್ತಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.