ಕರಾವಳಿ

ಸೌಹಾರ್ದತೆಗೆ ಸಾಕ್ಷಿಯಾದ ಸುಳ್ಯ ನಗರ ಪಂಚಾಯತ್ ಸದಸ್ಯೆ

ಸುಳ್ಯ: ಸೌಹಾರ್ದತೆ ಎನ್ನುವುದು ಕೇವಲ ಭಾಷಣ, ಬಾಯಿ ಮಾತಿಗೆ ಸೀಮಿತವಲ್ಲ, ಅದು ಕಾರ್ಯ ರೂಪಕ್ಕೆ ಬಂದಾಗ ಅದಕ್ಕೊಂದು ಅರ್ಥ ಬರುತ್ತದೆ ಎಂದು ಜನಪ್ರತಿನಿಧಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಅವರೇ  ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ 19ನೇ ಜಯನಗರ ವಾರ್ಡಿನ ಸದಸ್ಯೆ ಶಿಲ್ಪಾ ಸುದೇವ್.

ಇವರು ಸ್ಥಳೀಯ ಮುಸ್ಲಿಂ ಕುಟುಂಬವೊಂದರ ಮದುವೆ ಸಮಾರಂಭಕ್ಕೆ ತಮ್ಮ ಮನೆಯ ಆವರಣ ಮತ್ತು ಸಂಪೂರ್ಣ ಮನೆಯನ್ನು ನೀಡಿ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ನಗರ ಪಂಚಾಯತ್ ಸದಸ್ಯರ ಈ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.


ಮದುವೆ ಸಮಾರಂಭಕ್ಕೆ ಮನೆ ಮತ್ತು ಪರಿಸರವನ್ನು ನೀಡಿದ್ದಲ್ಲದೆ ಮದುವೆ ಸಮಾರಂಭಕ್ಕೆ ಬಂದ ಅತಿಥಿಗಳನ್ನು ತಾವೇ ಸತ್ಕರಿಸುವ ಮೂಲಕ ಮಾನವೀಯ ಗುಣವನ್ನು ಮೆರೆದರು.
ಒಂದು ವಾರದ ಮೊದಲು ಇದೇ ಪರಿಸರದ ಮತ್ತೊಂದು ಮುಸ್ಲಿಂ ಕುಟುಂಬದ ಮದುವೆ ಸಮಾರಂಭಕ್ಕೆ ತಾವೇ ನೇತೃತ್ವವನ್ನು ನೀಡಿ ವಿವಾಹ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ಶಿಲ್ಪಾ ನೋಡಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಇದೀಗ ಫೆಬ್ರವರಿ 14ರಂದು ಜಯನಗರ ನಿವಾಸಿ ದಿ. ಉಸ್ಮಾನ್ ರವರ ಪುತ್ರ ರಿಯಾಜ್ ಎಂಬುವವರ ವಿವಾಹ ಸಮಾರಂಭ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಮನೆ ಮತ್ತು ಆವರಣವನ್ನು ನೀಡಿ ಸಹಕರಿಸಿದ್ದಾರೆ.ಇವರ ಈ ನಡೆ ಊರಿನ ಸೌಹಾರ್ದತೆಗೆ ಸಾಕ್ಷಿಯಾಗಿದ್ದು ಸಾರ್ವಜನಿಕ ವಲಯದಿಂದ ಪ್ರಸಂಶೆಗಳು ಕೇಳಿಬರುತ್ತಿದೆ. ಜಾತಿ, ಧರ್ಮ ಎಂದು ಕಚ್ಚಾಟ ನಡೆಸುವ ಆಧುನಿಕ ಕಾಲ ಘಟ್ಟದಲ್ಲಿ ಓರ್ವ ಜನಪ್ರತಿನಿಧಿಯಾಗಿ ಶಿಲ್ಪಾ ಅವರ ನಡೆ ನಾಗರಿಕ ಸಮಾಜಕ್ಕೆ ಮಾದರಿಯೆನಿಸಿದೆ.

Leave a Reply

Your email address will not be published. Required fields are marked *

error: Content is protected !!