ಹಾವು ಕಚ್ಚಿ ಒಂದೇ ಕಡೆ ಮಲಗಿದ್ದ ಮೂರು ಮಕ್ಕಳು ಸಾವು
ಒಂದೇ ಕಡೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತದಿಂದ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ನ ಗರ್ವಾ ಜಿಲ್ಲೆಯ ಚಪ್ಕಲಿ ಗ್ರಾಮದಲ್ಲಿ ವರದಿಯಾಗಿದೆ. ‘ಆನೆ ದಾಳಿಗೆ ಹೆದರಿ ಒಂದೇ ಕುಟುಂಬದ ಸುಮಾರು 8 ಮಕ್ಕಳು ಮನೆಯ ನೆಲದ ಮೇಲೆ ಮಲಗಿದ್ದರು. ಈ ವೇಳೆ ಮಧ್ಯರಾತ್ರಿ ವಿಷಕಾರಿ ಹಾವೊಂದು ಮನೆಯೊಳಗೆ ಬಂದಿದ್ದು, ಈ ವೇಳೆ ಮೂವರು ಮಕ್ಕಳನ್ನು ಕಚ್ಚಿದೆ ಎನ್ನಲಾಗಿದೆ.

ಹಾವಿನ ಕಡಿತದ ಬಳಿಕ ಮಕ್ಕಳು ಅಳಲು ಆರಂಭಿಸಿದ್ದು ಈ ವೇಳೆ ಮಕ್ಕಳು ಹಾವಿನ ಕಡಿತ ಮನಗಂಡು ಕೂಡಲೇ ಹಳ್ಳಿಯಲ್ಲಿದ್ದ ಮಾಂತ್ರಿಕನ ಬಳಿಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಈ ವೇಳೆ ಹಾವಿನ ಕಡಿತಕ್ಕೊಳಗಾಗಿದ್ದ ಹೆಣ್ಣು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಕೂಡ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಪ್ರದೇಶದಲ್ಲಿ ತಿಂಗಳಿಂದ ಆನೆಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಗ್ರಾಮಸ್ಥರನ್ನು ಒಟ್ಟಿಗೇ ಇರಲು ಸೂಚಿಸಿದ್ದರು ಎನ್ನಲಾಗಿದೆ.