ಬೆಳಂದೂರು: ಈಡನ್ ಗ್ಲೋಬಲ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.
ಶಿಕ್ಷಕರ ವಿಶೇಷ ಪಥ ಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಶಿಕ್ಷಕರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಶಾಲೆಯ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಶಿಕ್ಷಕರ ದಿನಾಚರಣೆಯ ಸಂದೇಶ ನೀಡಿದರು.
ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮೇಲಿನ ಅನಿಸಿಕೆಯನ್ನು ಹಂಚಿಕೊಂಡರು. ಶಿಕ್ಷಕರು ವಿವಿಧ ದೇಶಭಕ್ತಿ ಗೀತೆ, ಭಾವಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ಬೋಧಕೇತರ ವರ್ಗದವರಿಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳು ಶಾಲಾ ಶಿಕ್ಷಕರನ್ನು ಬ್ರೈನಿ ಬಂಚ್, ಕ್ಲಾಸೀ ಕ್ರೀವ್, ವಿಸ್ಡಮ್ ವಿಜಾರ್ಡ್ ಮತ್ತು ಮೆಂಟರ್ ಮಿಂಗಲ್ ಎಂಬ ನಾಲ್ಕು ತಂಡಗಳಾಗಿ ವಿಂಗಡಿಸಿ ವಿವಿಧ ಆಕರ್ಷಕ ಸ್ಪರ್ಧೆಗಳನ್ನು ನಡೆಸಿದರು. ಮೆಂಟರ್ ಮಿಂಗಲ್ ತಂಡವು ಚಾಂಪಿಯನ್ ಹಾಗೂ ವಿಸ್ಡಮ್ ವಿಜಾರ್ಡ್ ರನ್ನರ್ ಅಪ್ ಆಗಿ ಹೊರ ಹೊಮ್ಮಿತು. ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಮುಹಮ್ಮದ್ ಸುಹಾನ್ ಸ್ವಾಗತಿಸಿದರು. ವಿದ್ಯಾರ್ಥಿ ಮುಹಮ್ಮದ್ ಅಜೀಂ ಡಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕಿ ರಿಫಾ ಫಾತಿಮಾ ವಂದಿಸಿದರು.