ಕರಾವಳಿ

ಮರಳು ಗಾಳಿಸಿ ಈ ಶ್ರಮಜೀವಿ ದಂಪತಿ ಮಾಡಿರುವ ಸಾಧನೆ ಏನೆಂದು ಗೊತ್ತೇ..



✍️ ಹಸೈನಾರ್ ಜಯನಗರ ದೂರದ ಊರಿನಿಂದ ಸುಳ್ಯಕ್ಕೆ ಕಾರ್ಮಿಕರಾಗಿ ಬಂದು ಬದುಕು ಅರಳಿಸಿ ಸ್ವಂತ ಊರಿನಲ್ಲಿ ಮಹಲು ನಿರ್ಮಿಸಿದ ಶ್ರಮಜೀವಿ ದಂಪತಿಗಳ ಕಥೆ ಇದು.

ಪರಶುರಾಮ ಹಾಗೂ ಸಾವಿತ್ರಿ ದಂಪತಿಗಳು ಮೂಲತ: ಉತ್ತರ ಕರ್ನಾಟಕದ ಮುಂಡರಗಿ ತಾಲೂಕಿನ ಮುಂಡುವಾಡ ಗ್ರಾಮದವರು.

ಪರಶುರಾಮರವರು ಕಳೆದ 30 ವರ್ಷಗಳ ಹಿಂದೆ ಸುಳ್ಯಕ್ಕೆ ಕೂಲಿ ಕೆಲಸ ಅರಸಿ ಬಂದವರು. ಸುಳ್ಯಕ್ಕೆ ಬಂದ ಪ್ರಾರಂಭದಲ್ಲಿ ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಹಲವು ವರ್ಷ ಒಬ್ಬಂಟಿಗನಾಗಿ ಜೀವನ ನಡೆಸಿದ ಬಳಿಕ 25 ವರ್ಷಗಳ ಹಿಂದೆ ಮುಂಡುವಾಡ ಗ್ರಾಮದಿಂದ ತನ್ನ ಸೋದರ ಮಾವನ ಮಗಳು ಸಾವಿತ್ರಿಯವರನ್ನು ಮದುವೆಯಾಗಿ ಬಳಿಕ ಸುಳ್ಯಕ್ಕೆ ಕರೆತಂದರು.

ಸುಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರು ಬೇರೆ ಬೇರೆ ಗುತ್ತಿಗೆದಾರರೊಂದಿಗೆ ಕಟ್ಟಡ ಕಾರ್ಮಿಕರಾಗಿ ಕೆಲಸಕ್ಕೆ ಹೋಗುತ್ತಿದ್ದರು.ಈ ಸಂದರ್ಭದಲ್ಲಿ ಗುತ್ತಿಗೆದಾರರು ಈ ದಂಪತಿಗಳಿಗೆ ಹೆಚ್ಚಾಗಿ ಮರಳು ಗಾಳಿಸುವ ಕೆಲಸವನ್ನು ನೀಡುತ್ತಿದ್ದರು.ಆ ಸಂದರ್ಭದಲ್ಲಿ ಇವರಿಗೆ ದಿನಗೂಲಿ ಸಂಬಳ 40 ಮತ್ತು 60 ರೂಪಾಯಿ ಸಿಗುತ್ತಿತ್ತು. ಒಂದೊಂದು ದಿನದಲ್ಲಿ ಲಾರಿಯಲ್ಲಿ ಬರುವ ಲೋಡ್ ಮರಳನ್ನು ಗಾಳಿಸಿಕೊಡುತ್ತಿದ್ದರು.
ಇವರು ಕೆಲಸದಲ್ಲಿ ತೋರಿಸುತ್ತಿದ್ದ ಕಠಿಣ ಶ್ರಮ ಮತ್ತು ಸಮಯ ಪಾಲನೆಯನ್ನು ನೋಡಿದ ಗುತ್ತಿಗೆದಾರರು ಈ ದಂಪತಿಗಳಿಗೆ ಗುತ್ತಿಗೆ ಆಧಾರದಲ್ಲಿ ಮರಳು ಗಾಳಿಸುವ ಕೆಲಸವನ್ನು ನೀಡಲು ಪ್ರಾರಂಭಿಸಿದರು.

ಅಂದು ಇನ್ನೂರು ರೂಪಾಯಿಯಿಂದ ಆರಂಭವಾದ ಗುತ್ತಿಗೆ ಕೆಲಸ ಇಂದು ಒಂದು ಲೋಡು ಮರಳಿಗೆ ಎರಡು ಸಾವಿರ ರೂಗಳಿಗೆ ಬಂದು ನಿಂತಿದೆ ಎನ್ನುತ್ತಿದ್ದಾರೆ ಈ ದಂಪತಿಗಳು.
ಆದರೆ ಈ ದುಡಿಮೆಗಾಗಿ ರಾತ್ರಿ ಹಗಲು ಎನ್ನದೆ ಅದೆಷ್ಟೋ ದಿನಗಳು ಕಷ್ಟಪಟ್ಟು ದುಡಿದ ದಿನಗಳನ್ನು ನೆನಪಿಸಿ ತಮ್ಮ ಕೆಲಸದ ಜೊತೆ ಜೊತೆಯಲ್ಲಿ ತಮ್ಮ ಇಬ್ಬರು ಪುತ್ರಿಯರಾದ ನೇತ್ರಾ ಹಾಗೂ ಚೈತ್ರಾ ರಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೂಡ ನೀಡಿ ಮಾದರಿ ಪೋಷಕರಾಗಿ ಬೆಳೆದರು.
ಹಿರಿಯ ಪುತ್ರಿ ನೇತ್ರಾ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಉತ್ತಮ ವರ ಬಂದ ಹಿನ್ನೆಲೆಯಲ್ಲಿ ಅವರನ್ನು ವಿವಾಹವಾಗಿ ಇದೀಗ ಕುಟುಂಬ ಜೀವನವನ್ನು ಸಾಗಿಸುತ್ತಿದ್ದಾರೆ.


ಕಿರಿಯ ಪುತ್ರಿ ಚೈತ್ರಾ ಪದವಿ ಶಿಕ್ಷಣವನ್ನು ಮುಗಿಸಿ ಸುಳ್ಯದಲ್ಲಿ ಕಂಪ್ಯೂಟರ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಮಕ್ಕಳ ಬಾಲ್ಯದ ಜೀವನವನ್ನು ನೆನೆದು ಕಣ್ಣೀರು ಹಾಕಿದ ಈ ಪೋಷಕರು ನಾವು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮಕ್ಕಳನ್ನು ಬಿಟ್ಟು ಹೋಗಲು ಸ್ಥಳವಿಲ್ಲದೆ ಅಂಗನವಾಡಿ ಕೇಂದ್ರಗಳಲ್ಲಿ ಬಿಟ್ಟು ಹೋಗುತ್ತಿದ್ದೆವು. ಅದೆಷ್ಟೋ ದಿನಗಳು ಸಂಜೆಯವರೆಗೆ ನಮ್ಮ ಬರುವಿಕೆಗಾಗಿ ಮಕ್ಕಳು ಅಂಗನವಾಡಿಯಲ್ಲಿ ಕುಳಿತು ನಮ್ಮನ್ನು ಕಾಯುತ್ತಿದ್ದರು. ಅಂಗನವಾಡಿಯ ಕಾರ್ಯಕರ್ತೆಯರು ನಮ್ಮ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು ಇದರಿಂದ ನಮಗೆ ನೆಮ್ಮದಿ ಕಾಣುತ್ತಿತ್ತು ಎಂದು ಆ ದಿನವನ್ನು ನೆನೆದುಕೊಂಡರು.


ಅಲ್ಲದೆ ಸುಳ್ಯದಲ್ಲಿ ಪ್ರತಿಯೊಬ್ಬ ಗುತ್ತಿಗೆದಾರರು, ನಮ್ಮ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು,ನಾವು ಕೆಲಸ ನಿರ್ವಹಿಸಿದ ಮನೆಯವರು,ನಮ್ಮ ಮನೆಯ ಅಕ್ಕಪಕ್ಕದ ನಿವಾಸಿಗಳು ನಮಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಿದ್ದಾರೆ. ನಮ್ಮ ಕಷ್ಟಗಳಿಗೆ ಸ್ಪಂದನೆಯನ್ನು ನೀಡಿದ್ದಾರೆ. ಅವರೆಲ್ಲರ ಸಹಕಾರದಿಂದ ಸುಳ್ಯದಲ್ಲಿ ನಾವು ಇಷ್ಟೊಂದು ಉತ್ತಮ ಜೀವನವನ್ನು ಸಾಗಿಸಲು ಸಾಧ್ಯವಾಯಿತು ಎಂದು ಸುಳ್ಯದ ಜನತೆಗೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.

ಛಲ ಮತ್ತು ಶ್ರಮದಿಂದ ಹಗಲಿರುಳು ದುಡಿದು ಬಂದ ಹಣವನ್ನು ಜೋಡಿಸಿ ಒಟ್ಟುಗೂಡಿಸಿ ಕಳೆದ ಎರಡು ವರ್ಷಗಳ ಹಿಂದೆ ತಮ್ಮ ಊರಾದ ಮುಂಡುವಾಡ ಗ್ರಾಮದಲ್ಲಿ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಸುಮಾರು 5 ಎಕರೆ ಕೃಷಿ ಜಮೀನನ್ನು ಖರೀದಿಸಿ ಮೆಕ್ಕೆಜೋಳ ಕೃಷಿ,ತೆಂಗು ಕೃಷಿ, ತರಕಾರಿ ಮತ್ತು ಮಾವಿನ ಗಿಡಗಳನ್ನು ನೆಟ್ಟು ಆದಾಯದ ಮಾರ್ಗವನ್ನು ಮಾಡಿಕೊಂಡಿದ್ದಾರೆ.
ಅಲ್ಲದೆ ವಾಸಿಸಲು ಯೋಗ್ಯವಾದ ಒಂದು ಮನೆಯನ್ನು ಕೂಡ ಖರೀದಿಸಿಕೊಂಡಿದ್ದಾರೆ.

ಈ ದಂಪತಿಗಳ ವಿಶೇಷತೆ ಏನೆಂದರೆ ಹಲವಾರು ಕುಟುಂಬಗಳು ಉತ್ತರ ಕರ್ನಾಟಕ ಭಾಗದಿಂದ ತಮ್ಮ ಕೃಷಿ ಭೂಮಿಗಳನ್ನು ಬಿಟ್ಟು ಕೂಲಿ ಕೆಲಸಕ್ಕೆ ಸುಳ್ಯಕ್ಕೆ ಬಂದಿದ್ದರೆ ಈ ದಂಪತಿಗಳು ಸುಳ್ಯದಲ್ಲಿ ದುಡಿಮೆ ಮಾಡಿ ತಮ್ಮ ಊರಿನಲ್ಲಿ ಕೃಷಿ ಭೂಮಿ ಮತ್ತು ಮನೆಯನ್ನು ನಿರ್ಮಿಸಿರುವುದು ಇವರ ಯಶಸ್ವಿ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೈಯಲ್ಲಿ ದುಡಿಮೆ ಇದ್ದರೂ ಕೆಲವೊಂದು ವ್ಯಕ್ತಿಗಳು ತನ್ನ ಸೋಮಾರಿತನದಿಂದ ಆ ಕೆಲಸಗಳನ್ನು ಮಾಡದೆ ಗುರಿ ಇಲ್ಲದ ಜೀವನವನ್ನು ನಡೆಸಿ ನಮ್ಮ ಹಣೆಬರ ಇದೇ ಎಂದು ಹೇಳಿಕೊಳ್ಳುವ ಅಷ್ಟೂ ಮಂದಿಗೆ ಈ ದಂಪತಿಗಳ ಜೀವನ ಮಾದರಿಯಾಗಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!