IPL 2023: ಚೆನ್ನೈ ಚಾಂಪಿಯನ್
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 16ನೇ ಸೀಸನ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭರ್ಜರಿ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಐಪಿಎಲ್ ನಲ್ಲಿ 5 ಬಾರಿ ಟ್ರೋಫಿ ಗೆದ್ದ 2ನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸಿ.ಎಸ್.ಕೆ ತಂಡದ ನಾಯಕ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್ಮನ್ ಗಿಲ್ (39) ಹಾಗೂ ವೃದ್ಧಿಮಾನ್ ಸಾಹ (54) ಉತ್ತಮ ಆರಂಭ ಒದಗಿಸಿದ್ದರು. ಗಿಲ್ ಔಟಾದ ಬಳಿಕ ಕ್ರೀಸ್ ಗೆ ಆಗಮಿಸಿದ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 33 ಎಸೆತಗಳಲ್ಲಿ ಸಾಯಿ ಸುದರ್ಶನ್ ಅರ್ಧಶತಕ ಪೂರೈಸಿದರು. ಅಲ್ಲಿಂದ ಶುರುವಾದ ಸಾಯಿ ಸುದರ್ಶನ್ ಸಿಡಿಲಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಗಳು ಪರದಾಡಿದರು.
19ನೇ ಓವರ್ವರೆಗೂ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಸಾಯಿ ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ ಮೂಲಕ 96 ರನ್ ಚಚ್ಚಿದ್ದರು. ಪರಿಣಾಮ ಸಿಎಸ್ಕೆ ತಂಡವು ನಿಗದಿತ 20 ಓವರ್ಗಳಲ್ಲಿ 214 ರನ್ಗಳಿಸಲು ಸಾಧ್ಯವಾಯಿತು.
215 ರನ್ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಸಿಎಸ್ಕೆಗೆ ಮಳೆ ಅಡ್ಡಿಯಾಯಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಪಂದ್ಯ ಮುಂದುವರೆಸಲಾಯಿತು. ಅದರಂತೆ ಸಿಎಸ್ಕೆ ತಂಡಕ್ಕೆ 15 ಓವರ್ಗಳಲ್ಲಿ 171 ರನ್ನುಗಳ ಗುರಿ ನೀಡಲಾಯಿತು.
ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡವು ಕೊನೆಯ ಓವರಲ್ಲಿ 13 ರನ್ ಗಳಿಸಬೇಕಿತ್ತು. ಅದರಲ್ಲೂ ಕೊನೆಯ 2 ಎಸೆತಗಳಲ್ಲಿ 10 ರನ್ ಬೇಕಿದ್ದ ವೇಳೆ ರವೀಂದ್ರ ಜಡೇಜಾ ಸಿಕ್ಸ್ ಹಾಗೂ ಫೋರ್ ಬಾರಿಸುವ ಮೂಲಕ ಸಿಎಸ್ಕೆ ತಂಡಕ್ಕೆ 5 ವಿಕೆಟ್ಗಳ ಜಯ ತಂದುಕೊಟ್ಟರು.
ಈ ಜಯದೊಂದಿಗೆ ಸಿಎಸ್ಕೆ ತಂಡವು 5ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಮಾತ್ರ ಐಪಿಎಲ್ನಲ್ಲಿ 5 ಬಾರಿ ಚಾಂಪಿಯನ್ ಆಗಿತ್ತು. ಇದೀಗ 5ನೇ ಸಲ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಧೋನಿ ಪಡೆ ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಸರಿಗಟ್ಟಿದೆ.