ಕಲ್ಲಡ್ಕ ಭಟ್, ಡಾ. ಎಂ.ಕೆ ಪ್ರಸಾದ್ ಬೌನ್ಸರ್’ಗೆ ಸಿಕ್ಸರ್ ಬಾರಿಸುವ ತವಕದಲ್ಲಿ ಪುತ್ತಿಲ ಟೀಮ್
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಆರೆಸ್ಸೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಡಾ.ಎಂ.ಕೆ ಪ್ರಸಾದ್ ಭಂಡಾರಿ ಅವರು ಆರೋಪಗಳ ಸುರಿಮಳೆಗೈದಿದ್ದು ಪುತ್ತಿಲರದ್ದು ಯಾವ ಸೀಮೆಯ ಹಿಂದುತ್ವ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ನಿಜವಾದ ಹಿಂದುತ್ವದ ಪಕ್ಷವಾಗಿದ್ದು ಬಿಜೆಪಿಗಿಂತ ದೊಡ್ಡ ಹಿಂದುತ್ವ ಈ ಜಗತ್ತಿನಲ್ಲಿಲ್ಲ ಎಂದು ಹೇಳಿರುವ ಅವರು ಪುತ್ತಿಲ ಹಿಂದೂಗಳ ವಿರುದ್ದವೇ ಹೋರಾಡಿದ್ದು ದೇವಸ್ಥಾನದ ವ್ಯವಹಾರದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದೆಲ್ಲಾ ಹಲವು ಆರೋಪಗಳನ್ನು ಹೊರಿಸಿದ್ದು ಪುತ್ತಿಲರ ಗೋ ರಕ್ಷಣೆಯ ಕಾರ್ಯವನ್ನೂ ವ್ಯಂಗ್ಯವಾಡಿದ್ದಾರೆ. ಇದು ಪುತ್ತೂರು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.
ಬ್ಯಾಟ್ ಚಿಹ್ನೆಯ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರು, ಕಾರ್ಯಕರ್ತರು ಭರ್ಜರಿ ಪ್ರಚಾರ, ಮತ ಯಾಚನೆಯಲ್ಲಿ ತೊಡಗಿದ್ದು ಇದೀಗ ಹಿಂದುತ್ವ ಮುಖಂಡರಿಬ್ಬರ ಬೌನ್ಸರ್‌ಗೆ ಸಿಕ್ಸರ್ ಹೊಡೆಯಲು ಪ್ಲಾನ್ ರೂಪಿಸುತ್ತಿರುವುದಾಗಿ ತಿಳಿದು ಬಂದಿದೆ.
ಪುತ್ತಿಲ ಪರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಸಹಿಸದವರು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಪುತ್ತಿಲರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ, “ಕೈಲಾಗದವರ ಕೊನೆಯ ಆಯುಧವೇ ಅಪಪ್ರಚಾರ” ಎಂದು ವಾದಿಸುತ್ತಾ ಸಾಮಾಜಿಕ ತಾಣಗಳಲ್ಲಿ ಬರೆದುಕೊಳ್ಳುತ್ತಿದ್ದು ಹಿಂದುತ್ವ ಮುಖಂಡರ ಬೌನ್ಸರ್‌ಗೆ ಸಿಕ್ಸರ್ ಬಾರಿಸುವುದರಲ್ಲಿ ತಲ್ಲೀಣರಾಗಿದ್ದಾರೆ.
ಪುತ್ತಿಲ ವಿರುದ್ಧ ಏನೇ ಅಪಪ್ರಚಾರ ಆದರೂ ಅದನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುತ್ತಿರುವ ಪುತ್ತಿಲ ಬೆಂಬಲಿಗರು ಈ ಚುನಾವಣೆಯಲ್ಲಿ ಪುತ್ತಿಲರನ್ನು ಗೆಲ್ಲಿಸಿ ತೋರಿಸುತ್ತೇವೆ ಎಂದು ಚಾಲೆಂಜ್ ಮಾಡುತ್ತಿದ್ದಾರೆ. ಅಲ್ಲದೇ ಪುತ್ತಿಲ ಪರವಾಗಿ ತಮ್ಮ ಪ್ರಚಾರ ಕಾರ್ಯಕ್ಕೆ ಇನ್ನಷ್ಟು ವೇಗ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.