ಕರಾವಳಿರಾಜಕೀಯ

ಸುಳ್ಯ: ದ್ವೇಷ ರಾಜಕೀಯ ಮಾಡುವ ಬಿಜೆಪಿ ಅಭಿವೃದ್ಧಿ ವಿಚಾರವನ್ನೇ ಮರೆತಂತಿದೆ ಪತ್ರಿಕಾಗೋಷ್ಠಿಯಲ್ಲಿ ಎಂ ವೆಂಕಪ್ಪ ಗೌಡ ಆರೋಪ



ಸುಳ್ಯ ನಗರ ಪಂಚಾಯತ್ ನ ಕಳೆದ ಸಾಮಾನ್ಯ ಸಭೆಯಲ್ಲಿ ಉಂಟಾಗಿರುವ ಗದ್ದಲದ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷ ಸದಸ್ಯ ಕಾಂಗ್ರೆಸ್ ಪಕ್ಷದ ಎಂ ವೆಂಕಪ್ಪಗೌಡ ಇಂದು ಸುಳ್ಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಪಕ್ಷದ ಮೇಲೆ ಕಿಡಿ ಕಾರಿದ್ದಾರೆ.

ಈ ವೇಳೆ ಮಾತನಾಡಿರುವ ಅವರು ದೇಶದ ಮಾಜಿ ಪ್ರಧಾನಿ ವಾಜಪೇಯಿಯವರ ಕಾಲದಲ್ಲಿ ಇದ್ದ ಪಕ್ಷದ ಸಿದ್ಧಾಂತಗಳನ್ನು ಈಗಿನ ಬಿ ಜೆ ಪಿ ಯವರು ಮರೆತಿರುವಂತೆ ಕಾಣುತ್ತಿದೆ. ಆಗಿನ ಕಾಲದ ಬಿಜೆಪಿಯವರ ಪಕ್ಷ ಸಿದ್ದಾಂತಗಳು ಉತ್ತಮವಾಗಿತ್ತು. ಆದರೆ ಇತ್ತೀಚೆಗೆ ಬಿಜೆಪಿ ಪಕ್ಷದವರು ದ್ವೇಷ ರಾಜಕೀಯವನ್ನು, ಮತ್ತು ಜಾತಿ ರಾಜಕೀಯವನ್ನು ತರುವ ಮೂಲಕ ಅಭಿವೃದ್ಧಿಯ ಬಗ್ಗೆ ಚಿಂತಿಸುವುದನ್ನೇ ಮರೆತಂತೆ ಕಾಣುತ್ತಿದೆ ಎಂದು ಬಿಜೆಪಿ ಪಕ್ಷದವರನ್ನು ಟೀಕಿಸಿದ್ದಾರೆ.

ಸುಳ್ಯ ನಗರ ಪಂಚಾಯತ್ ಸಭೆಗೆ ಇಬ್ಬರು ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಿರುವುದು ವಿಪಕ್ಷ ಸದಸ್ಯರ ಮೇಲೆ ಹಲ್ಲೆ ಮಾಡಲೆಂದೇ ಅವರನ್ನು ನೇಮಿಸಿದಂತೆ ಕಾಣುತ್ತಿದೆ.ಕಳೆದ ನಗರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋತವರನ್ನು ಕರೆದು ತಂದು ಪಂಚಾಯಿತಿನಲ್ಲಿ ಕೂರಿಸಿ ವಿಪಕ್ಷ ಸ್ಥಾನದಲ್ಲಿ ನಿಂತು ಆಡಳಿತ ಪಕ್ಷದವರ ದುರಾಡಳಿತದ ಬಗ್ಗೆ ನಾವು ಮಾತನಾಡುವಾಗ ನಮ್ಮ ಮೇಲೆ ಹಲ್ಲೆಗೆ ಮುಂದಾಗುತ್ತಾರೆ.
ಮಾತೆತ್ತಿದರೆ ಅಭಿವೃದ್ಧಿಯ ಜಪವನ್ನು ಹೇಳುವ ಬಿಜೆಪಿಯವರು ನಗರದ ಕುಡಿಯುವ ನೀರಿನ ಜಾಕ್ ವೆಲ್ ನಿರ್ಮಾಣದ ಎರಡು ಕೋಟಿ ರೂಪಾಯಿಯ ಯೋಜನೆಯಲ್ಲಿ ಈಗಾಗಲೇ ಸುಮಾರು 20 ಲಕ್ಷ ರೂಪಾಯಿಗಳ ಕಾಮಗಾರಿಯನ್ನು ಪಯಶ್ವಿನಿ ನದಿಯಲ್ಲಿ ಮುಳುಗಿಸಿದ್ದಾರೆ ಎಂದವರು ಆರೋಪಿಸಿದರು.


ನಗರ ಪಂಚಾಯತ್ ಆವರಣದಲ್ಲಿ ತುಂಬಿದ್ದ ಕಸದ ರಾಶಿಯನ್ನು ತೆರೆವುಗೊಳಿಸುವ ಕಾರ್ಯದಲ್ಲಿ ಬೇರೆ ಬೇರೆ ಲೆಕ್ಕಗಳನ್ನು ತೋರಿಸಿ 215 ಟನ್ ಕಸದ ಲೆಕ್ಕಾಚಾರವು 800 ಟನ್ ಗೆ ಒಮ್ಮೆಗೆ ಜಿಗಿಯಿತು.
ಕಸಗಳನ್ನು ತುಂಬಿಸಿ ದೂರದ ಹುಣಸೂರಿನಲ್ಲಿ ಅದನ್ನು ತೂಕ ಪಡಿಸುವ ಅವೈಜ್ಞಾನಿಕ ಕೆಲಸಗಳನ್ನು ಮಾಡಿ ಇಂದಿಗೂ ಅದರ ಲೆಕ್ಕಾಚಾರವನ್ನು ಸರಿಯಾಗಿ ನೀಡುತ್ತಿಲ್ಲ.
ಕಳೆದ ಐದು ವರ್ಷಗಳಿಂದ ಸುಳ್ಯದ ಯಾವುದೇ ರಸ್ತೆಗಳು ಡಾಮರೀಕರಣ ಬಿಟ್ಟು ಪ್ಯಾಚ್ ವರ್ಕ್ ಕೂಡ ನಡೆಯುತ್ತಿಲ್ಲ.ನಗರ ಪಂಚಾಯತ್ ಕಚೇರಿಯಲ್ಲಿ ಇಂಜಿನಿಯರ್, ಆರೋಗ್ಯಾದಿಕಾರಿ, ಸೇರಿದಂತೆ ವಿವಿಧ ಅಧಿಕಾರಿಗಳ ನೇಮಕ ಮಾಡದೇ ಇದ್ದು ಈ ಎಲ್ಲಾ ವಿಷಯಗಳನ್ನು ಪ್ರಶ್ನಿಸಿ ನಾವು ಆಡಳಿತ ಪಕ್ಷದವರ ದುರಾಡಳಿತದ ಬಗ್ಗೆ ಎಚ್ಚರಿಸುವುದು ನಾವು ಮಾಡುವ ತಪ್ಪೇ? ಎಂದು ವೆಂಕಪ್ಪ ಗೌಡ ಪ್ರಶ್ನಿಸಿದರು.


ಸುಳ್ಯದ ಜನತೆಗೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಧರಣಿ ಕುಳಿತ ಸಂದರ್ಭದಲ್ಲಿ ಅದ್ಯಕ್ಷರ ಎದುರೇ ನಾಮ ನಿರ್ದೇಶಿತ ಸದಸ್ಯರು ನಮ್ಮನು ಹೊರ ಹೋಗುವಂತೆ,ನಮ್ಮ ಮೇಲೆ ಸವಾರಿ ಮಾಡುವಂತದನ್ನು ನಾವು ವಿರೋಧಿಸಬಾರದೇ? ಎಂದು ಪ್ರಶ್ನಿಸಿದ ಅವರು ಸುಳ್ಯದ ಜನತೆಯ ಮೂಲಭೂತ ಸಮಸ್ಯೆಗಳಲ್ಲಿ ಒಂದಾಗಿರುವ ನಿರಾಶ್ರೀತರಿಗೆ ಆಶ್ರಯ ಯೋಜನೆಯ ಒಂದೇ ಒಂದು ಮನೆಯನ್ನು ಇವರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಕೇಂದ್ರದಲ್ಲೂ ರಾಜ್ಯದಲ್ಲೂ ಇವರದೇ ಸರಕಾರ ಇದ್ದು ಇವರಿಗೆ ಏನನ್ನು ಮಾಡಲು ಸಾಧ್ಯವಾಗುತ್ತಿಲ್ಲವಾದರೆ ಇವರು ಯಾವ ಪುರುಷಾರ್ಥಕ್ಕೆ ಎಂದು ಕಟುವಾಗಿ ಟೀಕಿಸಿದರು.

ಒಳಚರಂಡಿ ಕಾಮಗಾರಿಯಲ್ಲಿ 2 ಕೋಟಿ 87 ಲಕ್ಷ ಅನುದಾನ ಪೋಲಾಗಿದೆ.
ಮುಂದಿನ ದಿನಗಳಲ್ಲಿ ಇದರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಿದ್ದೇವೆ, ಮತ್ತು ನಮ್ಮ ಪ್ರತಿಭಟನೆಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ. ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಪ್ರಶ್ನಿಸಲು ಸಿದ್ಧರಿದ್ದೇವೆ ಎಂದು ವೆಂಕಪ್ಪ ಗೌಡ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ವಿಪಕ್ಷ ನಾಯಕ ಬಾಲಕೃಷ್ಣ ಬಟ್ ಕೊಡೆಂಕೇರಿ ಮಾತನಾಡಿ ನಾಮ ನಿರ್ದೇಶಕ ಸದಸ್ಯರುಗಳ ಕರ್ತವ್ಯ ಏನು ಎಂಬುದನ್ನು ಅರಿಯದೆ ಇರುವವರನ್ನು ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು. ಬಿಜೆಪಿಯವರು ಮಾತೆತ್ತಿದರೆ ನಾವು ದಲಿತ ಸಮುದಾಯದ ಜನತೆಗೆ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳುವವರು ಅವರಾಗಿ ಏನು ಮಾಡುವುದಿಲ್ಲ, ನಾವು ಯಾವುದಾದರೂ ಒಂದು ಯೋಜನೆಯನ್ನು ಮಾಡಲು ಹೊರಟರೆ ಅದನ್ನು ತಡೆಯುವ ಕೆಲಸಕ್ಕೆ ಮುಂದಾಗುತ್ತಾರೆ. ಶಾಂತಿನಗರ ಕ್ರೀಡಾಂಗಣ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುತ್ತಿದ್ದು ಅದರ ನಿರ್ಮಾಣದ ಲೆಕ್ಕಾಚಾರದ ಫಲಕಗಳನ್ನು ಅಳವಡಿಸಿದೆ, ಸಾರ್ವಜನಿಕರಿಗೆ ಅದರ ಮಾಹಿತಿಗಳನ್ನು ನೀಡದೆ ಜನರ ದುಡ್ಡನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಇನ್ನೋರ್ವ ಸದಸ್ಯ ಶರೀಪ್ ಕಂಠಿ ಮಾತನಾಡಿ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ನಮ್ಮ ಶಾಸಕರು ನೂರು ಬಾರಿ ಹೋಗುತ್ತಾರೆ. ಆದರೆ ನಮ್ಮ ನಗರ ಪಂಚಾಯತಿಗೆ ಬಂದು ನಮ್ಮ ನಗರದ ಅಭಿವೃದ್ಧಿಗಾಗಿ ಮಾತನಾಡಲು ಅವರಲ್ಲಿ ಸಮಯ ಇರುವುದಿಲ್ಲ. ಯೋಜನೆಗಳನ್ನು ತರುವ ಬಗ್ಗೆ ಅವರಿಗೆ ಕಾಳಜಿ ಇಲ್ಲ.
ಸುಳ್ಯದ ಗಾಂಧಿನಗರದಲ್ಲಿ ಕಾರ್ಯದರ್ಶಿಸುತ್ತಿರುವ ಕೆಪಿಎಸ್ ಶಾಲೆ ಮೂಲಭೂತ ಸೌಕರ್ಯಗಳಿಲ್ಲದೆ ಅಲ್ಲಿಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ನಮ್ಮ ಸಚಿವರು ಶಾಲಾ ಸಮಿತಿಯ ಅಧ್ಯಕ್ಷರಾಗಿದ್ದು ಇತ್ತ ಗಮನ ಹರಿಸದೇ ಇರುವುದು ತುಂಬಾ ಖೇದಕರ ಸಂಗತಿಯಾಗಿದೆ ಎಂದರು.


ಕೇಳುವಾಗ ಇಡೀ ರಾಜ್ಯವನ್ನು ಸುತ್ತಬೇಕು ಎನ್ನುವ ಇವರಿಗೆ ಮರಳಿ ಒಂದು ದಿನ ನಮ್ಮದೇ ಊರಿಗೆ ಬರಬೇಕೆಂಬ ಚಿಂತೆ ಅವರಿಗಿಲ್ಲವೇ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ಸದಸ್ಯ ಧೀರಾ ಕ್ರಾಸ್ತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!