ಸೌದಿ ಅರೇಬಿಯಾದ ಕರೆನ್ಸಿ ನೀಡುವುದಾಗಿ ನಂಬಿಸಿ 4 ಲಕ್ಷ ರೂ ವಂಚನೆ
ಮಂಗಳೂರು: ವಿದೇಶಿ ಕರೆನ್ಸಿ ಮತ್ತು ಚಿನ್ನ ನೀಡುವುದಾಗಿ ಹೇಳಿ ಹಣ ಪಡೆದು ಕಾಗದದ ಕಟ್ಟನ್ನು ನೀಡಿ 4 ಲ.ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.

ಮುಡಿಪು ಜಂಕ್ಷನ್‌ನಲ್ಲಿರುವ ತಾಜ್‌ಬುಕ್ ಸ್ಟಾಲ್ ಎಂಬ ಅಂಗಡಿಗೆ ಬಂದಿದ್ದ ಓರ್ವ ಅಪರಿಚಿತ ವ್ಯಕ್ತಿಯು ಆತನ ಬಳಿ ಸೌದಿ ಅರೇಬಿಯಾ ದೇಶದ ಕರೆನ್ಸಿ ಮತ್ತು ಚಿನ್ನ ಇದ್ದು ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ಜ.29ರಂದು ಅಪರಿಚಿತ ವ್ಯಕ್ತಿ ಅಂಗಡಿಯವರಿಗೆ ಕರೆ ಮಾಡಿ 4 ಲಕ್ಷ ರೂ.ಗಳೊಂದಿಗೆ ಮಂಗಳೂರಿಗೆ ಬಂದು ಕರೆ ಮಾಡುವಂತೆ ತಿಳಿಸಿದ್ದ ಎನ್ನಲಾಗಿದೆ. ಅಂಗಡಿಯವರು ಜ.30ರಂದು ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗಕ್ಕೆ ಬರುವಂತೆ ತಿಳಿಸಿದ್ದ.
ಅದರಂತೆ ಅಂಗಡಿಯವರು ಕಾದು ನಿಂತಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಅಂಗಡಿಯವರಿಂದ 4 ಲ.ರೂ. ಪಡೆದು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕಟ್ಟನ್ನು ನೀಡಿ ತೆರಳಿದ್ದ.
ಅಂಗಡಿಯವರು ಕಟ್ಟನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಕಾಗದ ತುಂಡುಗಳನ್ನು ಮಡಚಿ ಒಂದರ ಮೇಲೆ ಒಂದರಂತೆ ನೋಟಿನಂತೆ ಇಟ್ಟಿರುವುದು ಕಂಡುಬಂದಿದೆ. ಮೋಸ ಹೋದವರು ಪೊಲೀಸ್ ದೂರು ನೀಡಿದ್ದು ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





