ಪುತ್ತೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಕಲ್ಲೇಗ..?
ಪುತ್ತೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಕಲ್ಲೇಗ ಅವರು ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಶ್ರಫ್ ಕಲ್ಲೇಗ ಆವರು ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಅವರನ್ನೇ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಲು ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಜ.30ರಂದು ಪುತ್ತೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲೂ ಅಶ್ರಫ್ ಕಲ್ಲೇಗ ಪರವಾಗಿ ಕಾರ್ಯಕರ್ತರು ಬ್ಯಾಟ್ ಬೀಸಿದ್ದು ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರಲ್ಲೂ ಅಶ್ರಫ್ ಕಲ್ಲೇಗರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಅಶ್ರಫ್ ಕಲ್ಲೇಗ ಅವರು ಈ ಹಿಂದೆಯೇ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬೇರೆಯವರಿಗೆ ಟಿಕೆಟ್ ಸಿಕ್ಕಿದರೂ ಮುನಿಸಿಕೊಳ್ಳದ ಅಶ್ರಫ್ ಕಲ್ಲೇಗ ಅವರು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದರು. ಮಾತ್ರವಲ್ಲದೇ ಯಾವುದೇ ಸಂದರ್ಭದಲ್ಲೂ ಪಕ್ಷ ವಿರೋಧಿ ಚಟುವಟಿಕೆ ನಡೆಸದೆ ಕ್ಲೀನ್ ಇಮೇನ್ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಟಿಕೆಟ್ ಖಚಿತ ಎನ್ನುವ ಮಾತುಗಳು ಬಲವಾಗಿ ಕೇಳಿ ಬಂದಿದೆ.
ಜೆಡಿಎಸ್ ಅಭ್ಯರ್ಥಿ ಸ್ಥಾನಕ್ಕೆ ಅಶ್ರಫ್ ಕಲ್ಲೇಗ ಮಾತ್ರವಲ್ಲದೇ ಪಕ್ಷದ ಪ್ರಮುಖರಾದ ಮೀರಾ ಸಾಹೇಬ್ ಕಡಬ, ಐ.ಸಿ ಕೈಲಾಸ್, ಇಬ್ರಾಹಿಂ ಗೋಳಿಕಟ್ಟೆ ಅವರ ಹೆಸರೂ ಕೇಳಿ ಬರುತ್ತಿದೆ. ಆದರೆ ಯಾವುದೂ ಅಂತಿಮವಾಗಿಲ್ಲ.