ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ:
ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಪ್ಯದಲ್ಲಿ 2019ರ ಸೆಪ್ಟೆಂಬರ್ 3ರಂದು ನಡೆದ ಕಾರ್ತಿಕ್ ಮೆರ್ಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಪ್ರಕರಣದ ತನಿಖೆ ನಡೆಸಿದ ಅಂದಿನ ಪೊಲೀಸ್ ನಿರೀಕ್ಷಕ ನಾಗೇಶ್ ಕದ್ರಿ ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಪ್ರೀತು @ ಪ್ರೀತೇಶ್ ಸುಲಾಯ, ಚರಣ್, ಕಿರಣ್ @ ಮಣಿ ಹಾಗೂ ಸಂತು @ ಸ್ಟಿವನ್ ಮಾಂತೇರೋ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯ್ಕ್ ಅವರು ಪ್ರೀತು @ ಪ್ರೀತೇಶ್ ಸುಲಾಯ ಹಾಗೂ ಕಿರಣ್ @ ಮಣಿ ವಿರುದ್ಧ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಐಪಿಸಿ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹3 ಲಕ್ಷ ದಂಡ ವಿಧಿಸಿದ್ದಾರೆ.
ಇದೇ ಪ್ರಕರಣದಲ್ಲಿ ಐಪಿಸಿ 341ರ ಅಡಿಯಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ₹500 ದಂಡ ವಿಧಿಸಲಾಗಿದೆ.
ಆರೋಪಿ ಸಂತು @ ಸ್ಟಿವನ್ ಮಾಂತೇರೋ ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದ್ದು, ಮತ್ತೋರ್ವ ಆರೋಪಿ ಚರಣ್ ಈಗಾಗಲೇ ಮೃತಪಟ್ಟಿದ್ದಾನೆ.
ಸರ್ಕಾರಿ ಅಭಿಯೋಜಕರಾದ ಜಯಂತಿ ಕೆ. ಅವರು ನ್ಯಾಯಾಲಯದಲ್ಲಿ ಪ್ರಕರಣದ ಪರವಾಗಿ ವಾದ ಮಂಡಿಸಿದ್ದರು.



