ಕರಾವಳಿ

ಸಾರೆಪುಣಿ: ಮೃತ ಫಾತಿಮತ್ ನಿಶಾನ ಮನೆಗೆ ಸಚಿವ ಯು.ಟಿ ಖಾದರ್ ಭೇಟಿ

ಪುತ್ತೂರು: ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಕೆದಂಬಾಡಿ ಗ್ರಾಮದ ಸಾರೆಪುಣಿಯ ಫಾತಿಮತ್ ನಿಶಾನ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ನಿಶಾನ ಮನೆಯವರು ಪೊಲೀಸ್ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು
ಪೋಸ್ಟ್‌ಮಾರ್ಟಂ ವರದಿ ಆಧರಿಸಿ, ದೇಹದ ಮೇಲಿದ್ದ ಗಾಯಗಳ ಆಧಾರದ ಮೇಲೆ ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಜೈಲಿಗಟ್ಟಿದ್ದಾರೆ. ಪ್ರಸ್ತುತ ಪೋಸ್ಟ್‌ಮಾರ್ಟಂ ಮುಗಿದಿದ್ದು, ಮುಂದಿನ ಹಂತದ ತನಿಖೆ ನಡೆಯುತ್ತಿದೆ. ಫಾತಿಮತ್ ನಿಶಾನ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಮತ್ತು ಇಡೀ ಕುಟುಂಬದ ಜೊತೆ ನಾನಿದ್ದೇನೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದರು.



ಆ.6ರಂದು ಸಾರೆಪುಣಿಯಲ್ಲಿರುವ ಮೃತ ಫಾತಿಮತ್ ನಿಶಾನ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ತಿಳಿಸಿದ ಅವರು ಘಟನೆಯ ಬಗ್ಗೆ ನಿಶಾನ ಅವರ ತಾಯಿಯಿಂದ ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದರು.






ಮಗಳದ್ದು ಕೊಲೆ ಎಂದು ಸಾಬೀತಾಗಿದ್ದರೂ ಇದುವರೆಗೂ ಫಾರೆನ್ಸಿಕ್ ರಿಪೋರ್ಟ್ ಬಂದಿಲ್ಲ ಎಂದು ಫಾತಿಮತ್ ನಿಶಾನ ಅವರ ತಾಯಿ ಜುಬೈದಾ ಅವರು ಸಚಿವ ಯು.ಟಿ ಖಾದರ್ ಅವರಲ್ಲಿ ಕೇಳಿದರು. ಇದಕ್ಕೆ ಉತ್ತರಿಸಿದ ಯು.ಟಿ ಖಾದರ್ ಅವರು ಫಾರೆನ್ಸಿಕ್ ರಿಪೋರ್ಟ್‌ಗೆ ಅದರದ್ದೇ ಆದ ಪ್ರೊಸೀಜರ್ ಇದೆ, ಅದು ಕ್ರಮ ಬದ್ದವಾಗಿ, ಸ್ಪಷ್ಟವಾದ ರೀತಿಯಲ್ಲಿ ಬರುವಾಗ ತಡವಾಗುತ್ತದೆ, ಅದರಲ್ಲಿ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಹೇಳಿದರು.

 

ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ:
ಪ್ರಕರಣದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ ಕಾನೂನು ಘಟಕವು ಸಂತ್ರಸ್ತ ಕುಟುಂಬದ ಪರವಾಗಿ ಕಾನೂನು ಹೋರಾಟ ನಡೆಸಲಿದೆ ಎಂದು ಯು.ಟಿ ಖಾದರ್ ಹೇಳಿದರು.





ಸರಕಾರದಿಂದ ಪರಿಹಾರಕ್ಕೆ ಯತ್ನ:
ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಸಂಬಂಧ ಶಾಸಕರಾದ ಅಶೋಕ್ ರೈ ಅವರೊಂದಿಗೆ ಚರ್ಚಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತಂದು ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.





ಕಠಿಣ ಶಿಕ್ಷೆಗೆ ಆಗ್ರಹ:
ಅಮಾಯಕ ಮಹಿಳೆ ಫಾತಿಮತ್ ನಿಶಾನ ಅವರನ್ನು ಅವರ ಪತಿಯ ಮನೆಯಲ್ಲಿ ಕೊಲೆ ಮಾಡಲಾಗಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಸೆಕ್ಷನ್‌ಗಳಡಿ ಕಠಿಣ ಕಾನೂನು ಕ್ರಮ ಜರಗಿಸಲು ಕ್ರಮ ವಹಿಸಬೇಕು ಎಂದು ಸಾರೆಪುಣಿ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಸಾರೆಪುಣಿ, ರಫೀಕ್, ಶಾಕಿರ್ ಕಣ್ಣ ಮೊದಲಾದವರು ಸಚಿವ ಯು.ಟಿ ಖಾದರ್ ಅವರಲ್ಲಿ ಆಗ್ರಹಿಸಿದರು.



ನ್ಯಾಯ ವಿಳಂಬವಾಗಬಾರದು-ಅನೀಸ್ ಕೌಸರಿ
ಎಸ್ಕೆಎಸ್ಸೆಸ್ಸೆಫ್ ರಾಜ್ಯ ಪ್ರ.ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿ ಫಾತಿಮತ್ ನಿಶಾನ ಅವರ ಸಾವಿನ ಪ್ರಕರಣ ಗಂಭೀರ ವಿಚಾರವಾಗಿದ್ದು ಇಂತಹ ಘಟನೆ ಭವಿಷ್ಯದಲ್ಲಿ ಎಲ್ಲೂ ಮರುಕಳಿಸಬಾರದು, ಈ ವಿಚಾರದಲ್ಲಿ ನ್ಯಾಯ ವಿಳಂಬವಾಗಬಾರದು ಮತ್ತು ಫಾತಿಮತ್ ನಿಶಾನ ಕುಟುಂಬಕ್ಕೆ ನ್ಯಾಯ ಸಿಗಬೇಕು ಮತ್ತು ಗರಿಷ್ಠ ಪರಿಹಾರ ಮೊತ್ತವನ್ನು ಸರಕಾರ ಘೋಷಿಸಬೇಕು ಎಂದು ಹೇಳಿದರು.



ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಒಳಮೊಗ್ರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಮಾಜಿ ಸದಸ್ಯ ಶೀನಪ್ಪ ನಾಯ್ಕ ಮುಡಾಲ, ಬಶೀರ್ ಕೌಡಿಚ್ಚಾರ್, ನೆ.ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯ ಇಬ್ರಾಹಿಂ ಪಳ್ಳತ್ತೂರು, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಹಬೀಬ್ ಕಣ್ಣೂರು, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್, ಕಾರ್ಯದರ್ಶಿ ನೌಶಾದ್ ತಿಂಗಳಾಡಿ, ಕೆದಂಬಾಡಿ ಗ್ರಾ.ಪಂ ಮಾಜಿ ಸದಸ್ಯ ಮೆಲ್ವಿನ್ ಮೊಂತೆರೋ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಉದ್ಯಮಿ ಮುಖ್ತಾರ್ ಕುಂಬ್ರ, ಇಕ್ಬಾಲ್ ಬಾಳಿಲ, ತಾಜು ರೆಂಜಲಾಡಿ, ಬದ್ರುನ್ನಿಸಾ ಪರ್ಪುಂಜ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!