ಫಿಫಾ ವಿಶ್ವಕಪ್: ರೋಚಕ ಹಣಾಹಣಿಯಲ್ಲಿ ಇಂಗ್ಲೆಂಡ್ ಮಣಿಸಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿದ ಅರ್ಜೆಂಟೀನಾ
ಇಂಗ್ಲೆಂಡ್ ತಂಡದ ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿದ ಲಿಯೋನೆಲ್ ಮೆಸ್ಸಿ ಪಡೆ, 2-1 ಗೋಲುಗಳ ರೋಮಾಂಚಕ ಜಯದೊಂದಿಗೆ ಫಿಫಾ ವಿಶ್ವಕಪ್ 2026ರ ಫೈನಲ್ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಅರ್ಜೆಂಟೀನಾ ತಂಡ ನಾಲ್ಕನೇ ವಿಶ್ವಕಪ್ ಗೆಲ್ಲುವತ್ತ ಚಿತ್ತ ನೆಟ್ಟಿದೆ.
ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಅಮೆರಿಕದ ಅಟ್ಲಾಂಟಾ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಐತಿಹಾಸಿಕ ಜಯ ದಾಖಲಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ.

ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಕಷ್ಟು ಹೆಣಗಾಡಿದವು. ಪಂದ್ಯದ 55ನೇ ನಿಮಿಷದಲ್ಲಿ ಇಂಗ್ಲೆಂಡ್ ಪರ ಆಂಥೋನಿ ಗಾರ್ಡನ್ ಭರ್ಜರಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಪಂದ್ಯ ಮುಗಿಯಲು ಕೇವಲ 5 ನಿಮಿಷಗಳು ಬಾಕಿ ಇರುವಾಗ ಲಿಯೋನೆಲ್ ಮೆಸ್ಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಮೆಸ್ಸಿ ನೀಡಿದ ಅದ್ಭುತ ಕಾರ್ನರ್ ಕಿಕ್ ನೆರವಿನಿಂದ ಎಂಜೊ ಫೆರ್ನಾಂಡಿಸ್ ಚೆಂಡನ್ನು ಗೋಲ್ ಆಗಿ ಪರಿವರ್ತಿಸಿ 1-1 ಗೋಲುಗಳ ಸಮಬಲ ತಂದರು.
ಪಂದ್ಯ ಮುಕ್ತಾಯದ ಹಂತದಲ್ಲಿ ಮೆಸ್ಸಿ ಮತ್ತೊಂದು ಅದ್ಭುತ ಕ್ರಾಸ್ ಪಾಸ್ ನೀಡಿದರು. ಇದನ್ನು ಲೌಟಾರೊ ಮಾರ್ಟಿನೆಝ್ ವಿನ್ನಿಂಗ್ ಗೋಲು ಬಾರಿಸಿ ಅರ್ಜೆಂಟೀನಾಕ್ಕೆ 2-1 ಅದ್ಭುತ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ ಸಾಧನೆ ಮಾಡಿದೆ. ಅಲ್ಲದೆ ಮುಂದಿನ ಭಾನುವಾರ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಮೆಗಾ ಫೈನಲ್ ಪಂದ್ಯದಲ್ಲಿ ಯೂರೋ ಚಾಂಪಿಯನ್ಸ್ ಆದ ಸ್ಪೇನ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.



